ಬೆಂಗಳೂರು: ಪಂಚವೃತ್ತಿಯ ಮೂಲಕ ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡುತ್ತಿರುವ ವಿಶ್ವಕರ್ಮ ಸಮುದಾಯವನ್ನು ಒಂದೇ ವೇದಿಕೆಯಡಿ ತಂದು ಸಂಘಟಿತ ಪ್ರಗತಿಗೆ ನೆರವಾಗಲು ರಾಜ್ಯ ವಿಶ್ವಕರ್ಮ ಮಹಾಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದ್ದು, ಬೆಂಗಳೂರಿನ ಕಾನಿಷ್ಕ ಹೋಟೆಲ್ ಸಭಾಂಗಣದಲ್ಲಿ ಒಕ್ಕೂಟದ ನಾಮಫಲಕ ಹಾಗೂ ಲಾಂಛನವನ್ನು ಅನಾವರಣಗೊಳಿಸಲಾಯಿತು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವಿಶ್ವಕರ್ಮ ಸಮುದಾಯದ ಮುಖಂಡರು, ಕಾರ್ಯಕಾರಿ ಸಲಹಾ ಸಮಿತಿ ಸಭೆಯಲ್ಲಿ ಒಕ್ಕೂ ಟದ ರಾಜ್ಯ ಅಧ್ಯಕ್ಷರಾಗಿ ವಿಜಯಕುಮಾರ್ ಪತ್ತಾರ್, ಗೌರವಾಧ್ಯಕ್ಷರಾಗಿ ಸರ್ವೇಶಾಚಾರ್, ಪ್ರಧಾನ ಸಂಚಾಲಕರಾಗಿ ಹೊಸಕೋಟೆ ಈಶ್ವರಾಚಾರ್ರನ್ನು ಸರ್ವಾನುಮತದಿಂದ ಘೋಷಣೆ ಮಾಡಲಾಯಿತು.
ರಾಜ್ಯ ವಿಶೇಷಚೇತನರ ಅಧಿನಿಯಮದ ಮಾಜಿ ಆಯುಕ್ತರಾದ ಪದ್ಮಶ್ರೀ ಪುರಸ್ಕöÈತ ಕೆ. ರಾಜಣ್ಣ ಅವರು ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಒಕ್ಕೂಟ ರಚನೆ ಒಂದು ಒಳ್ಳೆಯ ಪ್ರಯತ್ನ. ವಿಶ್ವಕರ್ಮರು ಶ್ರೀಮಂತ ಸಂಸ್ಕöÈತಿ ಕಲೆ ಪರಂಪರೆ ಹೊಂದಿರುವ ಜನಾಂಗ. ಆದರೆ ಇಂದಿನ ವ್ಯವಸ್ಥೆಯಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದು ಸಂಕಷ್ಟ ಎದುರಿಸುತ್ತಾರೆ. ಜನಾಂಗ ಹೊಂದಿದ್ದ ಗತವೈಭವವನ್ನು ಮರಳಿಸುವ ನಿಟ್ಟಿನಲ್ಲಿ ಒಕ್ಕೂಟ ಕಾರ್ಯಯೋಜನೆಗಳ ಮೂಲಕ ಪ್ರಾಮಾಣಿಕವಾಗಿ ಶ್ರಮಿಸಲಿ. ಸರ್ಕಾರ ಸಮಾಜದ ಬಗ್ಗೆ ಕಣ್ತೆರೆದು ನೋಡುವಂತರಾಗಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಒಕ್ಕೂಟದ ನೂತನ ಅಧ್ಯಕ್ಷ ವಿಜಯಕುಮಾರ್ ಪತ್ತಾರ್ ವಿವಿಧ ಸಂಘಟನೆಗಳಡಿ ಹರಿದು ಹಂಚಿ ಹೋಗಿರುವ ಸಮುದಾಯವನ್ನು ಒಂದು ತೆಕ್ಕೆಗೆ ತಂದು ರಚನಾತ್ಮಕ ಹೋರಾಟ, ಕಾರ್ಯವಿಧಾನದ ಮೂಲಕ ಸಮುದಾಯದ ಏಳಿಗೆಗೆ ಶ್ರಮಿಸಬೇಕೆಂದು ವಿಶ್ವಕರ್ಮ ಒಕ್ಕೂಟವನ್ನು ರಾಜ್ಯಮಟ್ಟದಲ್ಲಿ ರಚಿಸಲಾಗಿದೆ. ತಳಮಟ್ಟದಲ್ಲಿ ಒಕ್ಕೂಟದ ಬೇರುಗಳನ್ನು ಗಟ್ಟಿಗೊಳಿಸಿದ್ದು, ಪ್ರತೀ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮಮಟ್ಟಕ್ಕೆ ಸಂಘಟನೆಯನ್ನು ವಿಸ್ತರಿಸಲು ಸಮುದಾಯದವರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪ್ರಧಾನ ಸಂಚಾಲಕ ಈಶ್ವರಾಚಾರ್ಅವರು ಸೃಷ್ಟಿಕರ್ತರಾದ ವಿಶ್ವಕರ್ಮ ಸಮುದಾಯವನ್ನು ಹೊಗಳುವ ಸಮಾಜ, ಸರ್ಕಾರಗಳು ಅವರಿಗೆ ಸವಲತ್ತು ಕಲ್ಪಿಸುವಲ್ಲಿ ಮಾತ್ರ ಹಿಂದೇಟು ಹಾಕುತ್ತಿವೆ. ಇದಕ್ಕೆ ಸಮುದಾಯದಲ್ಲಿನ ಅರಿವಿನ ಕೊರತೆ, ಧ್ವನಿ ಎತ್ತದಿರುವುದು ಸಹ ಕಾರಣವಾಗಿದೆ. ಹಾಗಾಗಿ ಸಮುದಾಯದ ಪ್ರಬಲ ಧ್ವನಿಯಾಗಲು ವಿಜಯಕುಮಾರ್ ಪತ್ತಾರ್ ಅವರ ನೇತೃತ್ವದಲ್ಲಿ ಒಕ್ಕೂಟ ಶ್ರಮಿಸಲಿದೆ ಎಂದರು.
ಖ್ಯಾತ ಗಾಯಕ ರವೀಂದ್ರ ಯಾವಗಲ್, ಮೂಡಬಿದರೆಯ ಸೀತಾರಾಮ ಆಚಾರ್ಯ, ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಸಿ.ಪಿ.ಮಾಯಾಚಾರ್ ಹಾಗೂ ದಕ್ಷಿಣ ಕನ್ನಡ ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್ ಮಾತನಾಡಿ ಸಮುದಾಯಕ್ಕೆ ದಾರಿದೀಪವಾಗಿ ಒಕ್ಕೂಟ ಕಾರ್ಯನಿರ್ವಹಿಸಲಿ ಎಂದು ಆಶಿಸಿ ಉಪ ಪಂಗಡಗಳು, ಭಾಷಿಕ ಅಂತರಗಳನ್ನು ಮರೆತು ಒಕ್ಕೂಟದ ಸಕಾರಾತ್ಮಕ ಹೆಜ್ಜೆಗಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆಂದು ತಿಳಿಸಿದರು. ಇದೇ ವೇಳೆ ಸಮುದಾಯದ ಸಾಧಕರಾದ ಪದ್ಮಶ್ರೀ ಕೆ.ರಾಜಣ್ಣ, ಗಾಯಕ ರವೀಂದ್ರ ಯಾವಗಲ್, ರಥಶಿಲ್ಪಿ ಬಸವರಾಜ್ ಅವರನ್ನು ಒಕ್ಕೂಟದಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಸಮುದಾಯದ ರಾಜ್ಯದ ವಿವಿಧೆಡೆಯ ಮುಖಂಡರಾದ ದೇವೇಂದ್ರಪತ್ತಾರ, ಕೆಡಿ ಬಡಿಗೇರ ಹಣಮಂತಪ್ಪ ಹೂಲಗೇರಿ, ನಾಗೇಂದ್ರಚಾರ್, ಸತೀಶ್ಆಚಾರ್, ಈರಣ್ಣ ಬಡಿಗೇರ, ಅಶೋಕ ಸುತಾರ, ಶಿವಪ್ರಸಾದ್, ಕೆ.ಎಂ.ಮAಜುನಾಥ್, ಶೇಖರ್, ಕಾಶೀನಾಥ್ ಪತ್ತಾರ, ಮಹಾದೇವ ಪಾಂಚಾಳ, ಸೇರಿ ಹಲವರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮ ಪೂಜೆ ನೆರವೇರಿಸಿ ಒಕ್ಕೂಟದ ಒಳಿತಿಗೆ ಪ್ರಾರ್ಥಿಸಲಾಯಿತು.