ಬೆಂಗಳೂರು: ಬಾಕಿ ಬಿಲ್ಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ಲಿಮಿಟೆಡ್(ಕಿಯೋನಿಕ್ಸ್)ನ ವೆಂಡರ್ಸ್, ಬಾಕಿ ಬಿಲ್ ಬಿಡುಗಡೆ ಮಾಡಲು ಮತ್ತು “ಕಿರುಕುಳಕ್ಕೆ” ಅಂತ್ಯಹಾಡಲು ಮಧ್ಯಪ್ರವೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕಿಯೋನಿಕ್ಸ್ನಲ್ಲಿ ಕೆಲಸ ಮಾಡುತ್ತಿರುವ ಸುಮಾರು 450 ರಿಂದ 500 ವೆಂಡರ್ಸ್, ಬಾಕಿ ಬಿಲ್ಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ಆಡಳಿತ ಮಂಡಳಿಯಿಂದ ಅರ್ಹತಾ ಮಾನದಂಡಗಳಲ್ಲಿನ ಬದಲಾವಣೆಗಳಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಕಿಯೋನಿಕ್ಸ್ ವೆಂಡರ್ಸ್ ಕ್ಷೇಮಾಭಿವೃದ್ಧಿ ಸಂಘವು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಕೆಲವು ದೊಡ್ಡ ಕಂಪನಿಗಳಿಗೆ ಸಹಾಯ ಮಾಡಲು ಅರ್ಹತಾ ಮಾನದಂಡಗಳನ್ನು ಬದಲಾಯಿಸಲಾಗಿದೆ ಎಂದು ಸಂಘ ಆರೋಪಿಸಿದೆ.
ಸಂಘವು ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಐಟಿ/ಬಿಟಿ ಸಚಿವರು ಮತ್ತು ಕರ್ನಾಟಕ ರಾಜ್ಯಪಾಲರಿಗೂ ಪತ್ರ ಬರೆದಿದೆ.
ಸಂಕಷ್ಟದಲ್ಲಿರುವ ವೆಂಡರ್ಸ್ ಯಾರಾದರೂ ತಮ್ಮ ಪ್ರಾಣ ಕಳೆದುಕೊಂಡರೆ ಅದಕ್ಕೆ ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಹೊಣೆಗಾರರಾಗಿರುತ್ತಾರೆ ಎಂದು ಸಂಘ ಹೇಳಿದೆ.
ಸಂಘದ ಅಧ್ಯಕ್ಷ ವಸಂತ್ ಕೆ ಬಂಗೇರ ಮಾತನಾಡಿ, ಸುಮಾರು 350-400 ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದ್ದು, ವೆಂಡರ್ಸ್ ಅವಲಂಬಿಸಿರುವ ಸುಮಾರು 6,000 ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಕಮಿಷನ್ಗೆ ಬೇಡಿಕೆ ಇಟ್ಟಿದ್ದ ಅಧಿಕಾರಿಯ ವಿರುದ್ಧ ಪ್ರತಿಭಟಿಸಿದ್ದ ಮಾರಾಟಗಾರರಿಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಕೆಲವು ನಿಯಮ ಉಲ್ಲಂಘನೆಗಳ ತನಿಖೆಯ ಹೆಸರಿನಲ್ಲಿ ಬಿಲ್ಗಳನ್ನು ತಡೆಹಿಡಿಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕ್ರಮ ಕೈಗೊಳ್ಳುವಂತೆ ಸಿಎಂಗೆ ಬಿಜೆಪಿ ಒತ್ತಾಯ
ಬಾಕಿ ಇರುವ ಬಿಲ್ಗಳನ್ನು ತೆರವುಗೊಳಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ರಾಜ್ಯ ಸರ್ಕಾರ ಗುತ್ತಿಗೆದಾರರನ್ನು “ಹಿಂಸಿಸುತ್ತಿದೆ” ಮತ್ತು ಈಗ ಕಿಯೋನಿಕ್ಸ್ ವೆಂಡರ್ಸ್ ಕ್ಷೇಮಾಭಿವೃದ್ಧಿ ಸಂಘವು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಶರತ್ ಬಚ್ಚೇಗೌಡ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ಹೇಳಿದೆ.