ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಗಂಡುಮಕ್ಕಳಿಗೆ ಉಚಿತ ಬಸ್ ಪ್ರಯಾಣ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶಕ್ತಿ ಯೋಜನೆಗೆ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಬಜೆಟ್ನಲ್ಲಿ 5,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ, ಹೆಚ್ಚಿನ ಮಹಿಳೆಯರು ಪ್ರಯಾಣಿಸುತ್ತಿರುವುದರಿಂದ ಈ ಅನುದಾನ ಸಾಕಾಗದೇ ಇರಬಹುದು. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಹೇಳಿದರು.
ರಸ್ತೆ ಸಾರಿಗೆ ನಿಗಮದ (ಆರ್ಟಿಸಿ) ಸಿಬ್ಬಂದಿಗೆ ವೇತನ ಪರಿಷ್ಕರಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆಗಳಿಲ್ಲ. 2024 ಕ್ಕೆ ಯಾವುದೇ ಹೊಸ ವೇತನ ಒಪ್ಪಂದಗಳಾಗಿಲ್ಲ. ಕಾರ್ಮಿಕ ಸಂಘಟನೆಗಳು ಇತ್ತೀಚೆಗೆ ಸರ್ಕಾರವನ್ನು ಸಂಪರ್ಕಿಸಿದ್ದು, ಈ ಬಗ್ಗೆ ಯಾವುದೇ ಚರ್ಚೆಗಳೂ ನಡೆದಿಲ್ಲ. ಆದಾಗ್ಯೂ, 2020 ರಲ್ಲಿ ಮಾಡಿದ ವೇತನ ಪರಿಷ್ಕರಣೆಗೆ ಸಂಬಂಧಿಸಿದ 38 ತಿಂಗಳ ಬಾಕಿಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ನಷ್ಟದಲ್ಲಿರುವ ಕೆಎಸ್ಆರ್’ಟಿಸಿ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ, ಕೆಎಸ್ಆರ್’ಟಿಸಿ ಪುನಶ್ಚೇತನಕ್ಕೆ ಏಕಸದಸ್ಯ ಸಮಿತಿ ವರದಿ ಸಲ್ಲಿಸಿದ್ದು, ವರದಿ ಕುರಿತು ಚರ್ಚೆಗಳು ನಡೆಯುತ್ತಿವೆ. ಸಾರಿಗೆ ನಿಗಮಗಳು ಮತ್ತು ಕಾರ್ಮಿಕರಿಗೆ ಅನುಕೂಲವಾಗುವ ಅಂಶಗಳನ್ನು ಪರಿಗಣಿಸಿ ಕೆಲ ನಿರ್ಣಯಗಳನ್ನು ಕೈಬಿಡಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಸಾರಿಗೆ ನಿಗಮಗಳನ್ನು 5,900 ಕೋಟಿ ರೂ. ಸಾಲದಲ್ಲಿ ಮುಳುಗಿಸಿತ್ತು. ಇದರಿಂದಾಗಿ ನಿವೃತ್ತ ಹಾಗೂ ಹಾಲಿ ನೌಕರರಿಗೆ ಸೌಲಭ್ಯ ಕಲ್ಪಿಸುವುದು ಕಷ್ಟವಾಗಿದೆ. ಅವರ ಅಧಿಕಾರಾವಧಿಯಲ್ಲಿ ಒಂದೇ ಒಂದು ಬಸ್ ಖರೀದಿಸಿಲ್ಲ, ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಬಸ್ಗಳನ್ನು ಖರೀದಿಸಲು ಮತ್ತು ನೇಮಕಾತಿ ನಡೆಸಲು ಪ್ರಾರಂಭಿಸಿದ್ದೇವೆ. ನಷ್ಟದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಎನ್ಡಬ್ಲ್ಯುಕೆಆರ್ಟಿಸಿ) ವಿಶೇಷ ಅನುದಾನ ನೀಡುವಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಹೀಗಾಗಿ ಮುಂಬರುವ ಬಜೆಟ್ನಲ್ಲಿ ನಿಗಮಕ್ಕೆ ವಿಶೇಷ ಅನುದಾನ ನೀಡುವ ಭರವಸೆ ಇದೆ. ಕಳೆದ ವರ್ಷ 250 ಕೋಟಿ ರೂ. ಮೀಸಲಿಡಲಾಗಿತ್ತು ಎಂದು ಮಾಹಿತಿ ನೀಡಿದರು.
ಪುರುಷರಿಗೂ ಉಚಿತ ಬಸ್ ಪ್ರಯಾಣದ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದಾಗ ಈ ಕುರಿತು ವಿಚಾರಿಸುತ್ತೇನೆ. ಸದ್ಯ ನಮ್ಮ ಬಳಿ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.