ಕೆಲವು ಕ್ರೀಡಾಪಟುಗಳೇ ಹಾಗೆ! ಅವರು ಅಂಕಣಕ್ಕೆ ವಿದಾಯ ಹೇಳಿದೊಡನೆ ಒಂದು ಯುಗಾಂತ್ಯವೇ ಆದಂತಾಗುತ್ತದೆ. ಅಂಥವರಲ್ಲಿ ರಾಫೆಲ್ ನಡಾಲ್ ಸಹ ಒಬ್ಬರು. ರೋಜರ್ ಫೆಡರರ್- ರಾಫೆಲ್ ನಡಾಲ್- ನೊವಾಕ್ ಜೊಕೊವಿಕ್ ಈ ತ್ರಿಮೂರ್ತಿಗಳನ್ನು ಟೆನಿಸ್ ಲೋಕ ಮರೆಯಲಸಾಧ್ಯ.
ಸಾಮಾನ್ಯವಾಗಿ ಟೆನಿಸ್ ಲೋಕದಲ್ಲಿ ಒಬ್ಬರೋ ಅಥವಾ ಇಬ್ಬರು ಅಸಾಮಾನ್ಯ ಅಟಗಾರರು ಪೈಪೋಟಿಗೆ ಬಿದ್ದಿರುತ್ತಾರೆ. ಈ ಮೂವರು ಟೆನಿಸ್ ದಂತಕತೆಗಳು ಪರಸ್ಪರ ಪೈಪೋಟಿಯಲ್ಲಿ ಶ್ರೇಷ್ಠ ಟೆನಿಸ್ ಅನ್ನು ಜಗತ್ತಿಗೆ ಉಣಬಡಿಸಿದರು.
ಟೆನಿಸ್ ಲೋಕದ ದಂತಕತೆ, ಕಿಂಗ್ ಆಫ್ ಕ್ಲೇ (ಆವೆ ಮಣ್ಣಿನ ರಾಜ) ಎಂದೇ ಪ್ರಖ್ಯಾತಿ ಹೊಂದಿರುವ ಸ್ಪೇನ್ನ ರಾಫೆಲ್ ನಡಾಲ್ ಮಂಗಳವಾರ ವೃತ್ತಿಪರ ಟೆನಿಸ್ನಿಂದ ನಿವೃತ್ತರಾದರು.