ಚಿಕ್ಕಬಳ್ಳಾಪುರ: ಎನ್.ಆರ್.ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಾಮಕೃಷ್ಣಪ್ಪ ಆಶ್ರಮ ಇಂದು ಉದ್ಘಾಟನೆ ಗೊಂಡಿತು. ನಿರ್ಗತಿಕರಿಗೆ ನಿರಾಶ್ರಿತರಿಗೆ ವೃದ್ಧರಿಗೆ ಆಶ್ರಯ ಕಲ್ಪಿಸಿಕೊಡುವ ಉದ್ದೇಶದಿಂದಾಗಿ ತಮ್ಮ ಹುಟ್ಟು ಹಬ್ಬದಂದೆ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಎನ್.ರಾಮಕೃಷ್ಣಪ್ಪ ರವರು ತಮ್ಮ ಸ್ವಗ್ರಾಮ ಅಗಲಗುರ್ಕಿಯಲ್ಲಿ ಆಶ್ರಮ ಪ್ರಾರಂಭ ಮಾಡಿದ್ದಾರೆ.
ಕಷ್ಟ ಕಾಲದಲ್ಲಿ ಬದುಕು ಎಷ್ಟೊಂದು ಕಷ್ಟಕರವಾಗಿರುತ್ತೆ ಎಂಬುದನ್ನು ಅರಿತಿದ್ದೇನೆ, ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಕೈಲಾದಷ್ಟು ನೆರವು ನೀಡಲು ಮುಂದಾಗಿದ್ದೇನೆ, ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸೇವೆಯನ್ನ ಇನ್ನಷ್ಟು ಉತ್ತಮವಾಗಿ ಮಾಡಲಾಗುವುದು ಎಂದು ಟ್ರಸ್ಟ್ ನ ಅಧ್ಯಕ್ಷ ಹಾಗೂ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರಾಮಕೃಷ್ಣಪ್ಪ ಹೇಳಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿ ಗ್ರಾಮದ ಶ್ರೀ ರಾಮಪುರ ರಸ್ತೆಯಲ್ಲಿ ಆಶ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.ನೊಂದವರ ಮುಖದಲ್ಲಿ ಒಂದಿಷ್ಟು ನಗುನೋಡಬೇಕೆಂಬುದು ನನ್ನ ಆಶಯಗಳಾಗಿವೆ, ನಿರ್ಗತಿಕರಿಗೆ ನಿರಾಶ್ರಿತರಿಗೆ ವೃದ್ಧರಿಗೆ ಸೇವೆಮಾಡುವ ಉದ್ದೇಶದಿಂದ ಆಶ್ರಮ ಉದ್ಘಾಟಿಸಿದ್ದು,
ನಿರ್ಗತಿಕರಿಗೆ ನಿರಾಶ್ರಿತರಿಗೆ ವೃದ್ಧರಿಗೆ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಆಶ್ರಮದಲ್ಲಿ ಗಂಡಸರಿಗೆ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಇದಲ್ಲದೆ ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಉದ್ದೇಶದಿಂದಾಗಿ ಎಲ್ಲ ರೀತಿಯ ತಯಾರಿ ನಡೆಸಿದ್ದು ಅಂತ ಮಕ್ಕಳು ಇಲ್ಲಿಗೆ ಬಂದು ಎಲ್ಲ ಸೌಲಭ್ಯಗಳು ಪಡೆಯಬಹುದು,ಇನ್ನು ಆರೋಗ್ಯ ಸೌಲಭ್ಯಗಳು ಒದಗಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಒಟ್ಟಾರೆಯಾಗಿ ಆಶ್ರಮದಲ್ಲೆ ವಸತಿ ಸೌಲಭ್ಯ ಒಳಗೊಂಡಂತೆ ಪ್ರತಿಯೊಂದು ಸೌಲಭ್ಯ ಉಚಿತವಾಗಿ ಕಲ್ಪಿಸಲಾಗುವುದು ನನ್ನ ಜೀವನದಲ್ಲಿ ಬಹಳಷ್ಟು ನೊಂದವರನ್ನ ಕಂಡಿದ್ದು ಕೈಲಾದಷ್ಟು ಸಹಾಯ ಹಸ್ತ ನೀಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡಿಸುವುದೆ ನನ್ನ ಏಕೈಕ ಉದ್ದೇಶ ಎಂದರು.
ಇದೇ ವೇಳೆ ಅಗಲಗುರ್ಕಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ ಮಾತನಾಡಿ ನೊಂದವರಿಗೆ ಒಂದಿಷ್ಟು ಸಹಾಯ ಮಾಡಲು ತಮ್ಮ ಸ್ವಗ್ರಾಮ ದಲ್ಲಿ ಆಶ್ರಮ ಪ್ರಾರಂಭ ಮಾಡಿದ್ದು ಬಹಳಷ್ಟು ಸಂತೋಷ ತಂದಿದೆ. ಅವರ ಈ ಕಾರ್ಯಕ್ಕೆ ಶುಭವಾಗಲಿ ಇಂತಹ ಸಮಾಜ ಸೇವಕರ ಸೇವೆ ಇತರರಿಗೂ ಮಾದರಿಯಾಗಲಿ ಎಂದರು.ಈ ಸಂದರ್ಭದಲ್ಲಿ ಗಜೇಂದ್ರ, ಮನೋಜ್, ವಿಜಯ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.