ದೊಡ್ಡಬಳ್ಳಾಪುರ: ವಾಲ್ಮೀಕಿ ಅವರು ರಾಮಾಯಣ ಕಾವ್ಯದಲ್ಲಿ ಭಾರತ ದೇಶದ ಚರಿತ್ರೆ, ಸಂಸ್ಕೃತಿ ಮತ್ತು ಪರಿಸರವನ್ನು ಸಮಗ್ರವಾಗಿ ಕಾಣಬಹುದಾಗಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣ ಕಾವ್ಯ ಓದುವ ಮೂಲಕ ಸಹೃದಯರು ಬದುಕಿನ ಸತ್ಯಗಳನ್ನು ಅರಿಯಬೇಕಾಗಿದೆ. ರಾಮಾಯಣ ಕಾವ್ಯದ ಮೂಲಕ ಸುಖ ದುಃಖಗಳು ಮನುಷ್ಯನ ಬದುಕಿನ ಭಾಗ ಎನ್ನುವ ಸಂದೇಶ ನೀಡಲಾಗಿದೆ ಎಂದರು.
ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಗುರುವಾಗಿ, ಕವಿಯಾಗಿ ಭಾರತೀಯರಿಗೆ ಸ್ಫೂರ್ತಿಯಾಗಿದೆ. ವಾಲ್ಮೀಕಿ ರಾಮಾಯಣ ರಾಮನ ಪಯಣದ ಕಥೆಯಾಗಿದೆ. ಸದ್ಗುಣ ಮತ್ತು ದುರ್ಗುಣ ನಡುವಿನ ಸಂಘರ್ಷದಲ್ಲಿ ಸದ್ಗುಣಕ್ಕೆ ಜನಮನ್ನಣೆ ಮತ್ತು ಜಯವಿದೆ ಎಂಬ ಸಂದೇಶ ಕಾವ್ಯದಲ್ಲಿದೆ. ರಾಮಾಯಣ ಕಾವ್ಯದಲ್ಲಿ ಸಾರ್ವಕಾಲಿಕ ಸತ್ಯಗಳ ಅಂಶವಿದೆ. ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಜಿ.ಸುರೇಶ್ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ವಾಲ್ಮೀಕಿ ಮತ್ತು ರಾಯಾಯಣ ಕಾವ್ಯದ ಪ್ರಭಾವ ಇದೆ. ರಾಮಾಯಣ ಬರೀ ರಾಜರ ಕಥೆಗಷ್ಟೇ ಸೀಮಿತವಾಗಿಲ್ಲ. ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳನ್ನು ಒಳಗೊಂಡ ಕಾವ್ಯವಾಗಿದೆ. ರಾಮಾಯಣ ಕಾವ್ಯ ಹಲವು ವೈಶಿಷ್ಟ್ಯಗಳಿಂದ ಶತಶತಮಾನಗಳಿಂದ ಜನಪ್ರಿಯ ಕಾವ್ಯವಾಗಿದೆ. ವಾಲ್ಮೀಕಿ ಅವರು ಕವಿಗಳಿಗೆ ಸಾರ್ವಭೌಮ ಆಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಕೋಶಾಧ್ಯಕ್ಷ ನಂ.ಮಹಾದೇವ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಪ್ರತಿನಿಧಿ ಸಫೀರ್, ಭಾರತ ಸ್ಕೌಟ್ಸ್ ಮತ್ತು ಗೈಡ್ ಸಹಾಯಕ ವೆಂಕಟರಾಜು, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ಎಂ.ರಾಮಕೃಷ್ಣ, ಮುನಿರತ್ನಮ್ಮ ಮುಂತಾದವರು ಭಾಗವಹಿಸಿದ್ದರು.