ರಾಯಚೂರು : ಲಾರಿ ಪಲ್ಟಿಯಾಗಿ ರಸ್ತೆ ಬದಿಯಲ್ಲಿ ನಿಂತವರ ಮೇಲೆ ಚೀಲಗಳು ಬಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಸಿಂಧನೂರಿನ ಪಿಡಬ್ಲ್ಯೂಡಿ ಸಮೀಪ ಡಾಲರ್ಸ್ ಕಾಲೋನಿ ಕ್ರಾಸ್ ಬಳಿ ದುರ್ಘಟನೆ ಜರುಗಿದೆ.
ಜವಳಗೇರಾ ಉಪವಿಭಾಗದ ಕಿರಿಯ ಎಂಜಿನಿಯರ್ ಗಳಾದ ಮಲ್ಲಿಕಾರ್ಜುನ (29), ಶಿವರಾಜು (28) , ಮೆಹಬೂಬ (30) ಎಂಬುವವರು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಶಿವರಾಜ್ ಹಾಗೂ ಮಲ್ಲಿಕಾರ್ಜುನ ಲಿಂಗಸುಗೂರು ತಾಲೂಕಿನ ಮಹೆಬೂಬ್ ಸಿಂಧನೂರು ಪಟ್ಟಣದವರು ಎಂದು ತಿಳಿದು ಬಂದಿದೆ.
ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದು, ಪಿಡಬ್ಲ್ಯೂಡಿ ಕ್ಯಾಂಪ್ ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಮೂವರು ಮಾತನಾಡುತ್ತಾ ನಿಂತಿದ್ದರು. ಇದೇ ವೇಳೆ, ರಾಯಚೂರಿನಿಂದ ಸಿಂಧನೂರು ಕಡೆ ಬರುತ್ತಿದ್ದ ಭತ್ತದ ಹೊಟ್ಟಿನ ಚೀಲಗಳನ್ನು ತುಂಬಿಕೊಂಡು ವೇಗವಾಗಿ ಬಂದ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ರಸ್ತೆ ಬದಿ ನಿಂತವರ ಮೇಲೆಯೇ ಚೀಲಗಳು ಉರುಳಿ ಬಿದ್ದಿದ್ದು, ಅದರಡಿ ಸಿಲುಕಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.