ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ 17 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಲೆ ಮತ್ತು ಸಂಸ್ಕೃತಿ, ಶೌರ್ಯ, ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ಕ್ರೀಡೆ ಮತ್ತು ಪರಿಸರ ಸೇರಿದಂತೆ ಏಳು ವಿಭಾಗಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ ಏಳು ಬಾಲಕರು ಮತ್ತು 10 ಬಾಲಕಿಯರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪದಕ, ಪ್ರಮಾಣಪತ್ರ ಮತ್ತು ಹೊತ್ತಿಗೆಯನ್ನು ವಿತರಿಸಿದರು.
17 ಮಕ್ಕಳಲ್ಲಿ ಒಬ್ಬರಾದ 14 ವರ್ಷದ ಲೇಖಕಿ ಕೀಯಾ ಹತ್ಕರ್ ಅವರನ್ನು ಕಲೆ ಮತ್ತು ಸಂಸ್ಕೃತಿಯಲ್ಲಿನ ಶ್ರೇಷ್ಠತೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಕಾಶ್ಮೀರದ 12 ವರ್ಷದ ಸೂಫಿ ಗಾಯಕ ಅಯಾನ್ ಸಜಾದ್ ಅವರನ್ನು ಕಾಶ್ಮೀರಿ ಸಂಗೀತ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.