ಸಂಪೂರ್ಣ ಸಾಕ್ಷಾರತೆಯನ್ನು ಪಡೆದ ದೇಶ ಅಭಿವೃದ್ಧಿಯ ಕಡೆಗೆ ಪಯಣಿಸುತ್ತದೆ. ವಿದ್ಯಾವಂತರು, ಅಕ್ಷರಸ್ಥರು ಹೆಚ್ಚಾದಂತೆ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದು ತಿಳಿದ ವಿಷಯವೇ ಆಗಿದೆ. ಶಿಕ್ಷಣದಲ್ಲಿ ಓದಿನಷ್ಟೇ ಮುಖ್ಯ ಬರವಣಿಗೆಯೂ ಕೂಡ. ಒಮ್ಮೆ ಬರೆಯುವುದು ಹತ್ತು ಬಾರಿ ಓದುವುದಕ್ಕೆ ಸಮ ಎಂದು ಭಾವಿಸಲಾಗಿದೆ. ಸುಂದರ ಮತ್ತು ಸ್ಪಷ್ಟವಾದ ಬರವಣಿಗೆ ನಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಶಿಕ್ಷಕರ, ವಿದ್ಯಾರ್ಥಿಗಳ , ಸಾಹಿತಿಗಳ ಬರವಣಿಗೆ ಸುಂದರವಾಗಿರುತ್ತದೆ ಎಂಬ ನಂಬಿಕೆ. ವೈದ್ಯರ ಬರವಣಿಗೆ ಅರ್ಥ ವಾಗದ್ದು ಎಂದು ಕೂಡ ಹೇಳುತ್ತಾರೆ.
ಸುಂದರ ಬರವಣಿಗೆ ನಮ್ಮ ಜ್ಞಾನ ಮತ್ತು ಅಚ್ಚುಕಟ್ಟುತನವನ್ನು ತೋರಿಸುತ್ತದೆ. ಜನವರಿ 23ನೇ ತಾರೀಖನ್ನು ರಾಷ್ಟ್ರೀಯ ಕೈ ಬರಹ ದಿನವನ್ನಾಗಿ 1977ನೇ ಇಸವಿಯಿಂದ ಆಚರಿಸಲಾಗುತ್ತಿದೆ. ಜಾನ್ ಹಾನ್ ಕಾಕ್ ಅವರ ಜನುಮದಿನವನ್ನು ನೆನಪಿಸಿ ಕೊಳ್ಳುವ ಸಲುವಾಗಿ ರೈಟಿಂಗ್ ಮ್ಯಾನುಫ್ಯಾಕ್ಚರಿಂಗ್ ಅಸೋಸಿಯೇಷನ್ ರವರು ಆರಂಭಿಸಿದರು. ಬರೆಯುವ ಸಾಧನಗಳಾದ ಪೆನ್ ಪೆನ್ಸಿಲ್, ಪುಸ್ತಕ, ಹಾಳೆ ಮೊದಲಾದವುಗಳ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಈ ಆಚರಣೆಯನ್ನು ಆರಂಭಿಸಲಾಗಿತ್ತು. ವಾಣಿಜ್ಯ ಕಾರಣಕ್ಕೆ ಎಂದು ಆರಂಭವಾದ ದಿನ ಇಂದಿಗೆ ಬೇರೆ ರೀತಿಯ ಮಹತ್ವವನ್ನು ಪಡೆದಿದೆ. ಏಕೆಂದರೆ ಬರವಣಿಗೆ ಹವ್ಯಾಸವು ಸಾಮಾನ್ಯರಲ್ಲಿ ತಪ್ಪುತ್ತಿದೆ.
ಎಲ್ಲರೂ ಮುದ್ರಿತ ಅಥವಾ ಡಿಜಿಟಲ್ ಬರವಣಿಗೆಯಲ್ಲಿ ತೊಡಗಿದ್ದಾರೆ.ಮುದ್ರಣ ಆರಂಭವಾಗುವ ಮೊದಲು ಎಲ್ಲ ಗ್ರಂಥಗಳನ್ನು ಕೂಡ ಕೈಯಿಂದ ತಾವೇ ತಯಾರಿಸಿದ ಮಸಿ (ಸ್ಯಾಹಿ) ಯಿಂದ ಬರೆಯುತ್ತಿದ್ದರು. ನಮ್ಮ ಹಳೆಯ ಇತಿಹಾಸಗಳನ್ನು ಶಾಸನಗಳಿಂದ ತಿಳಿಯಬಹುದು. ಕಲ್ಲಿನ ಮೇಲೆ, ತಾಮ್ರ ಪತ್ರ, ತಾಳೆ ಗರಿ ಇವುಗಳಲ್ಲಿ ಬರೆಯುವ ಅಭ್ಯಾಸವು ನಮ್ಮ ಪೂರ್ವಜರಲ್ಲಿ ಇತ್ತು. ಇಂದಿಗೂ ಕೂಡ ತಾಳೆಗರಿ ಮತ್ತು ತಾಮ್ರ ಪತ್ರಗಳನ್ನು ನೋಡುತ್ತೇವೆ. ತಾಳೆಗರಿಗಳು ಇಷ್ಟೇ ಹಳೆಯದಾದರೂ ಅದನ್ನು ಕಾಪಾಡಿಟ್ಟುಕೊಂಡಲ್ಲಿ ಇಂದಿಗೂ ಸ್ವಷ್ಟವಾಗಿ ಕಾಣುತ್ತವೆ. ಆದರೆ ಹಾಳೆಯಲ್ಲಿ ಇಂದಿನ ಮುದ್ರಣ ಯುಗದಲ್ಲಿ ಮುಸುಕಾಗಿ ಮುಕ್ಕಾಗುವ ಸಂಭವ ಇರುತ್ತದೆ.
ಆಂಗ್ಲರ ವಿದ್ಯಾಭ್ಯಾಸ ಪದ್ಧತಿ ಆರಂಭವಾದ ಮೇಲೆ ಸ್ಲೇಟು ಬಳಪ ಅಥವಾ ಸೀಮೆ ಸುಣ್ಣದಲ್ಲಿ ಬರೆಸಲು ಆರಂಭಿಸಿದರು. ನಂತರ ಮುದ್ರಣಗೊಂಡ ಪುಸ್ತಕಗಳು ಬಂದವು. ಅದಕ್ಕೂ ಮೊದಲು ಕೈ ಯಿಂದ ಬರೆಯುವ ಅಭ್ಯಾಸವೇ ಇತ್ತು. ಮನೆಯಲ್ಲಿಯೇ ಗಿಡ ಮೂಲಿಕೆಯ ಸ್ಯಾಹಿಯನ್ನು ತಯಾರಿಸಿ ತಾಡಪತ್ರ, ತಾಳೆಗರಿಗಳಲ್ಲಿ ನವಿಲುಗರಿಯ ಕಡ್ಡಿಯಿಂದ ಪೆನ್ನನ್ನು ತಯಾರಿಸಿಕೊಂಡು ಬರೆಯುತ್ತಿದ್ದರು.
ಇಂದಿಗೂ ಶಾಲೆಗಳಲ್ಲಿ ಮಾತ್ರ ಬರೆಯುವುದು ಉಳಿದಿದೆ. ಅದೂ ಕೂಡ ಕ್ಲಾಸ್ ವರ್ಕ್, ಹೋಮ್ ವರ್ಕ್ ಹಾಗೂ ಪರೀಕ್ಷಾ ಸಮಯದಲ್ಲಿ ಮಾತ್ರ. ಹೆಚ್ಚಿನ ಕೆಲಸಗಳು ಗಣಕ ಯಂತ್ರದ ಮೂಲಕ ಆಗುತ್ತಿರುವುದರಿಂದ ಇಂದು ಈ ಕೈ ಬರಹ ದಿನವನ್ನು ಜನರು ಬರೆಯುವುದನ್ನು ಮರೆಯದೇ ಇರುವ ಸಲುವಾಗಿ ಈ ದಿನದ ಆಚರಣೆಯನ್ನು ಕಡ್ಡಾಯವಾಗಿಯೇ ಆಚರಣೆ ಮಾಡಬೇಕಾದ ಅವಶ್ಯತೆ ಒದಗಿ ಬಂದಿದೆ.
ನಾವು ಬರೆಯುವ ಅಕ್ಷರಗಳಿಂದ ನಮ್ಮ ಗುಣ ಸ್ವಭಾವ ಹಾಗೂ ವ್ಯಕ್ತಿತ್ವ ತಿಳಿಯುವ ಕಲೆಗೆ ಗ್ರಾಫಲಜಿ ಎನ್ನುತ್ತಾರೆ. ನಮ್ಮ ಅಕ್ಷರಗಳು ನಮ್ಮ ಮನಸ್ಥಿತಿಯನ್ನು ತಿಳಿಸುತ್ತವೆ. ಕೆಲವರಿಗೆ ಸಣ್ಣ ಸಣ್ಣ ಅಕ್ಷರಗಳನ್ನು ಬರೆಯುವ ಅಭ್ಯಾಸಾವಿದ್ದರೆ ಇನ್ನೂ ಕೆಲವರು ದಪ್ಪ ದಪ್ಪ ಅಕ್ಷರ ಬರೆಯುತ್ತಾರೆ. ಇನ್ನೂ ಕೆಲವರ ಬರವಣಿಗೆ ಮುತ್ತು ಪೋಣಿಸಿ ದಂತೆ ಇರುತ್ತದೆ. ಕೈ ಬರಹವಲ್ಲದೆ ಮುದ್ರಿತ ಬರಹವೇನೋ ಅನ್ನುವಷ್ಟು ಸುಂದರ ಬರವಣಿಗೆ ಇರುತ್ತದೆ. ಮನುಷ್ಯನ ಮನಸ್ಥಿತಿ ಪರಿಸ್ಥಿತಿಗಳನ್ನು ಕೂಡ ಕೈ ಬರಹದಿಂದ ಕಂಡು ಹಿಡಿಯ ಬಹುದಾಗಿದೆ.
ಮಕ್ಕಳಿಗೆ ಬರವಣಿಗೆಯ ಅಭ್ಯಾಸವನ್ನು ಬಳಪದಿಂದ ಆರಂಭಿಸುತ್ತಾರೆ. ನಂತರ ಸೀಸ ಅಥವಾ ಪೆನ್ಸಿಲ್ ನಿಂದ ಬರೆಸುತ್ತಾರೆ. ಉತ್ತಮ ಕೈ ಬರಹಕ್ಕೆ ಮಸಿ ಅಥವಾ ಇಂಕ್ ಪೆನ್ (ಲೇಖನಿ) ಯಿಂದ ಬರೆದಾಗ ಬರುತ್ತದೆ. ಈಗೀಗ ಬಳಸಿ ಬಿಸಾಡುವ ಬಾಲ್ ಪೆನ್ ಮತ್ತು ಜೆಲ್ ಪೆನ್ ಗಳ ಕಾಲವಾಗಿದೆ. ಶಾಲೆ ಕಾಲೇಜು ಗಳಲ್ಲಿ ಕಾರ್ಯಾಲಯಗಳಲ್ಲಿ ಮತ್ತು ಎಲ್ಲ ಕಡೆಗೂ ಸಹಿ ಮಾಡಲು ಮಾತ್ರ ಬರವಣಿಗೆ ಉಳಿದಿದೆ. ಮಿಕ್ಕಂತೆ ಎಲ್ಲ ಕಡೆಗೂ ಗಣಕಯಂತ್ರ ಮೊಬೈಲ್ ಇಂತಹ ಯಂತ್ರೋಪಕರಣಗಳ ಬಳಕೆಯೇ ಹೆಚ್ಚಾಗಿದೆ.
ಇಂದಿನ ದಿನದಲ್ಲಿ ಶಾಲೆಯ ಮಕ್ಕಳಿಗೆ ಬರೆಯಲು ಒಂದು ರೀತಿಯ ಮೈಗಳ್ಳತನ ನಮ್ಮ ಕಾಲದಲ್ಲಿ ಯಾವುದೇ ಬೇರೆ ಶಾಲೆಯಲ್ಲಿ ಸಿಗುವ ಪ್ರಶ್ನೆ ಪತ್ರಿಕೆ ಅಥವಾ ಪಾಠದ ಸಾರಾಂಶಗಳನ್ನು ತಂದು ಮನೆಯಲ್ಲಿ ನಮ್ಮ ಸುಂದರವಾದ ಕೈಬರಹದಲ್ಲಿ ಬರೆದುಕೊಂಡು ನೆನಪಿನಲ್ಲಿರಿಸಿಕೊಳ್ಳುತ್ತಿದ್ದೆವು ಇಂದು ಎಲ್ಲವನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಲಾಗುತ್ತದೆ. ಇದರಿಂದ ಆಗುವ ಅಡ್ಡ ಪರಿಣಾಮವೆಂಧರೆ ಪರೀಕ್ಷೆ ಬರೆಯುವ ಕಾರದಲ್ಲಿ ಸಮಯ ಸಾಕಾಗದೇ ಕೆಲವು ಪ್ರಶ್ನೆಗಳನ್ನು ಬಿಟ್ಟು ಬರುತ್ತಾರೆ. ಮಕ್ಕಳ ಅಭಿವೃದ್ಧಿಗೆ ಆಧುನಿಕ ಯಂತ್ರೋಪಕರಣಗಳ ಪ್ರಯೋಗ ಬೇಕಾಗಿದ್ದರೂ ಕೆಲವು ಹಳೆಯ ಪದ್ಧತಿ ಅದರಲ್ಲಿ ನಮ್ಮ ಸ್ವಂತ ಕೈಬರಹದಲ್ಲಿಯೇ ಬರೆಯುವುದು ಉತ್ತಮ.ತಮಾಷೆಯ ವಿಷಯವೆಂದರೆ ಈ ಕೈಬರಹದ ಲೇಖನವನ್ನು ಕೂಡ ಅಕ್ಷರಗಳಲ್ಲಿ ಬರೆಯದೇ ಟಂಕಿಸಿ ಕಳಿಸುತ್ತೇವೆ. ಆದರೆ ಇಂದಿನ ದಿನದ ಆಚರಣೆಯನ್ನು ಎರಡಕ್ಷರ ಬರೆದು ಆಚರಿಸಿದರೆ ಸೊಗಸು.