ಬೆಂಗಳೂರು: ಭೋಪಾಲ್ನಲ್ಲಿ ನಡೆದ 67ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ (NSCC) ಆರು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿರುವ ಬೆಂಗಳೂರಿನ 18 ವರ್ಷದ ಅಭಿಷೇಕ್ ಶೇಖರ್ ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಮಧ್ಯಪ್ರದೇಶ ರಾಜ್ಯ ಶೂಟಿಂಗ್ ಅಕಾಡೆಮಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಒಲಿಂಪಿಯನ್ಗಳು ಮತ್ತು ವಿಶ್ವಕಪ್ ಚಾಂಪಿಯನ್ಗಳು ಸೇರಿದಂತೆ ಭಾರತದ ಗಣ್ಯ ಶೂಟರ್ಗಳಿದ್ದರು. ಅಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಅಭಿಷೇಕ್, ಕಿರಿಯ ಪುರುಷರ 10-ಮೀಟರ್ ಏರ್ ರೈಫಲ್ ಫೈನಲ್ನಲ್ಲಿ 251.4 ಅಂಕ ಗಳಿಸುವುದರೊಂದಿಗೆ ಬೆಳ್ಳಿಯ ಜೊತೆಗೆ ಮೂರು ಚಿನ್ನದ ಪದಕಗಳನ್ನು ಗೆದ್ದರು.
ಫೈನಲ್ ಪಂದ್ಯದಲ್ಲಿ ಎದುರಾಳಿಯಾಗಿದ್ದ 2024 ರ ಪ್ಯಾರಿಸ್ ಒಲಿಂಪಿಕ್ಸ್ನ ಸ್ಪರ್ಧಿ ರುದ್ರಂಕ್ಷ್ ಪಾಟೀಲ್ ಅವರನ್ನು ಸೋಲಿಸಿದರು. ತಿಲೋತ್ತಮಾ ಸೇನ್ ಅವರೊಂದಿಗೆ ಜೂನಿಯರ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಅಭಿಷೇಕ್ ನಾಗರಿಕ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದರು.
2019 ರಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಅಭಿಷೇಕ್, 10 ಮೀಟರ್ ಶೂಟಿಂಗ್ ಸ್ಪರ್ಧೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಚಿನ್ನ ಗೆಲ್ಲುವ ಮೂಲಕ ತರಬೇತಿ ಪಡೆದ ಎರಡನೇ ತಿಂಗಳಲ್ಲಿ ಕರ್ನಾಟಕದ ಎಲ್ಲಾ ದಾಖಲೆಗಳನ್ನು ಮುರಿದ್ದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಎರಡು ವರ್ಷಗಳ ವಿರಾಮದ ನಂತರ ಶಿಕ್ಷಣದ ಮೇಲೆ ಕೇಂದ್ರೀಕರಿಸಿದ್ದ ಅವರು 2022 ರಲ್ಲಿ ಮತ್ತೆ ಶೂಟಿಂಗ್ ಗೆ ಮರಳಿದ್ದರು. ಅಂದಿನಿಂದ ರಾಜ್ಯ ಶೂಟಿಂಗ್ ಚಾಂಪಿಯನ್ಶಿಪ್ ಮತ್ತು ದಸರಾ ಕಪ್ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಗಳಿಸಿದ್ದಾರೆ.
ಅವರಿಗೆ ಬೆಂಗಳೂರಿನ ಶೂಟಿಂಗ್ ಅಕಾಡೆಮಿಯಲ್ಲಿ ಹೆಸರಾಂತ ತರಬೇತುದಾರ ರಾಮಚಂದ್ರನ್ ಪುರುಷೋತ್ತಮನ್ ತರಬೇತಿ ನೀಡುತ್ತಿದ್ದಾರೆ. ಅವರಿಗೆ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಬೆಂಬಲವಾಗಿ ನಿಂತಿದೆ. ಮುಂದಿನ ಒಲಿಂಪಿಕ್ಸ್ನಲ್ಲಿ ವೇದಿಕೆಯ ಮೇಲೆ ನಿಂತು ನನ್ನ ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದು ನನ್ನ ಅಂತಿಮ ಕನಸು ಎಂದು ಅಭಿಷೇಕ್ ತಮ್ಮ ಭವಿಷ್ಯದ ಮಹತ್ವಾಕಾಂಕ್ಷೆಗಳನ್ನು ಹಂಚಿಕೊಂಡಿದ್ದಾರೆ.