ಭರೂಚ್: ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್ನಲ್ಲಿರುವ ರಾಸಾಯನಿಕ ಘಟಕವೊಂದರಲ್ಲಿ ಸೋರಿಕೆಯಾದ ವಿಷಕಾರಿ ಅನಿಲವನ್ನು ಸೇವಿಸಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಗುಜರಾತ್ ಫ್ಲೋರೊಕೆಮಿಕಲ್ಸ್ ಲಿಮಿಟೆಡ್ (ಜಿಎಫ್ಎಲ್) ಉತ್ಪಾದನಾ ಘಟಕದಲ್ಲಿ ಪೈಪ್ನಿಂದ ಸೋರಿಕೆಯಾದ ವಿಷಕಾರಿ ಅನಿಲವನ್ನು ಉಸಿರಾಡಿದ ನಂತರ ಸಂತ್ರಸ್ತರು ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ದಹೇಜ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿಎಂ ಪಾಟಿದಾರ್ ತಿಳಿಸಿದ್ದಾರೆ.
ಅವರನ್ನು ಕೂಡಲೇ ಭರೂಚ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರಲ್ಲಿ ಮೂವರು ಭಾನುವಾರ ಮುಂಜಾನೆ 3 ಗಂಟೆಗೆ ಮೃತಪಟ್ಟರೆ, ಇನ್ನೊಬ್ಬರು ಬೆಳಿಗ್ಗೆ 6 ಗಂಟೆಗೆ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
‘ರಾತ್ರಿ 10 ಗಂಟೆ ಸುಮಾರಿಗೆ ಕಂಪನಿಯ ಸಿಎಂಎಸ್ ಸ್ಥಾವರದ ನೆಲ ಅಂತಸ್ತಿನ ಮೂಲಕ ಹಾದುಹೋಗಿರುವ ಪೈಪ್ನಿಂದ ಅನಿಲ ಸೋರಿಕೆಯಾಗಿದೆ. ಈ ವೇಳೆ ನಾಲ್ವರು ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ನಾಲ್ವರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ರಾಜೇಶ್ ಕುಮಾರ್ (ಗುಜರಾತ್ ಮೂಲದವರು), ಮುದ್ರಿಕಾ ಯಾದವ್ (ಜಾರ್ಖಂಡ್ಗೆ ಸೇರಿದವರು), ಸುಶಿತ್ ಪ್ರಸಾದ್ ಮತ್ತು ಮಹೇಶ್ ನಂದಲಾಲ್ (ಇಬ್ಬರೂ ಉತ್ತರ ಪ್ರದೇಶದವರು) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಎಫ್ಎಲ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಿಗ್ನೇಶ್ ಪರ್ಮಾರ್, ಈ ಬಗ್ಗೆ ತನಿಖೆ ನಡೆಸಲಿದ್ದು, ಮೃತ ಕಾರ್ಮಿಕರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.