ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ “ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ” ಕುಸಿದಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಉತ್ತರಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆಗ್ರಹಿಸಿದ್ದಾರೆ.
ಶುಕ್ರವಾರ ಮೊದಲ ಬಾರಿಗೆ ಅಮೆರಿಕ ಕರೆನ್ಸಿ ಡಾಲರ್ ಎದುರು ರೂಪಾಯಿ 18 ಪೈಸೆ ಕುಸಿದು 86 ರೂಪಾಯಿಗೆ ಕುಸಿದಿದೆ.
“ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಇದುವರೆಗಿನ ಕನಿಷ್ಠ ಮಟ್ಟವನ್ನು ತಲುಪಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದು ಡಾಲರ್ ಮೌಲ್ಯ 86.4 ರೂಪಾಯಿಗೆ ತಲುಪಿದೆ” ಎಂದು ಪ್ರಿಯಾಂಕಾ ಗಾಂಧಿ X ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ, ಒಂದು ಡಾಲರ್ ಮೌಲ್ಯ 58 ರಿಂದ 59 ರೂಪಾಯಿಗಳಾಗಿದ್ದಾಗ, ನರೇಂದ್ರ ಮೋದಿ ರೂಪಾಯಿ ಮೌಲ್ಯವನ್ನು ಸರ್ಕಾರದ ಪ್ರತಿಷ್ಠೆಯೊಂದಿಗೆ ಹೋಲಿಕೆ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕಿ ವಾಗ್ದಾಳಿ ನಡೆಸಿದ್ದಾರೆ.
“ನನಗೆ ಎಲ್ಲವೂ ಗೊತ್ತಿದೆ. ಯಾವುದೇ ದೇಶದ ಕರೆನ್ಸಿ ಈ ರೀತಿ ಕುಸಿಯಲು ಸಾಧ್ಯವಿಲ್ಲ…” ಎಂದು ಮೋದಿ ಹೇಳುತ್ತಿದ್ದರು. ಆದರೆ ಇಂದು ಅವರೇ ಪ್ರಧಾನಿಯಾಗಿದ್ದಾರೆ ಮತ್ತು ರೂಪಾಯಿ ಕುಸಿತದ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈಗ ಅವರು ದೇಶದ ಜನರಿಗೆ ಉತ್ತರಿಸಬೇಕು” ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.