ಬೌಲರ್ ಗಳ ಸಂಘಟಿತ ದಾಳಿ ಮತ್ತು ನಾಯಕಿ ಸ್ಮೃತಿ ಮಂದಾನ ಅವರ ಅತ್ಯಮೋಘ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ನಿರಂತರ ಎರಡನೇ ಜಯ ದಾಖಲಿಸಿದೆ.ವಡೋದರಾದಲ್ಲಿ ಸೋಮವಾರ ದಿಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗೆಲುವಿಗೆ 141 ರನ್ ಗಳ ಗುರಿ ಪಡೆದಿದ್ದ ಆರ್ ಸಿಬಿ ಕೇವಲ 2 ವಿಕೆಟ್ ನಷ್ಟಕ್ಕೆ ಇನ್ನೂ 22 ಎಸೆತಗಳು ಬಾಕಿ ಉಳಿದಿರುವಂತೆ ಜಯಘೋಷ ಮೊಳಗಿಸಿತು. ಈ ಮೂಲಕ ಹಾಲಿ ಚಾಂಪಿಯನ್ ತಂಡ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲೂ ಅಗ್ರಸ್ಥಾನಿಯಾಗಿ ಮುಂದುವರಿಯಿತು.
ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಸ್ಮೃತಿ ಮಂದಾನ ಡ್ಯಾನಿ ವಾಟ್ ಹಾಡ್ಜ್ ಜೊತೆ ಪ್ರಥಮ ವಿಕೆಟ್ ಗೆ ಕೇವಲ 10.5 ಓವರ್ ಗಳಲ್ಲೇ 107 ರನ್ ಗಳ ಜೊತೆಯಾಟವಾಡಿದರು. ಅಲ್ಲಿಗೆ ದಿಲ್ಲಿಯ ಕೈಯ್ಯಿಂದ ಸಂಪೂರ್ಣವಾಗಿ ಆರ್ ಸಿಬಿ ಕೈಗೆ ಪಂದ್ಯ ಜಾರಿತು. ಸ್ಮೃತಿ ಮಂದಾನ 47 ಎಸೆತಗಳಲ್ಲಿ 81 ರನ್ ಸಿಡಿಸಿದರು. ಅದರಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದವು. ಮತ್ತೊಂದು ತುದಿಯಲ್ಲಿ ಡ್ಯಾನಿ ವ್ಯಾಟ್ ಹಾಡ್ಜ್ ಅವರು 33 ಎಸೆತಗಳಿಂದ 7 ಬೌಂಡರಿಗಳಿದ್ದ 42 ರನ್ ಗಳಿಸಿದರು.
ಕೊನೆಗೂ ಮಧ್ಯಮ ವೇಗಿ ಅರುಂಧತಿ ಈ ಜೋಡಿಯನ್ನು ಮುರಿಯುವಲ್ಲಿ ಯಶಸ್ ಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಮೃತಿ ಮಂದಾನ ಅವರ ವಿಕೆಟ್ ಅನ್ನು ಮತ್ತೊಬ್ಬ ಮಧ್ಯಮ ವೇಗಿ ಶಿಖಾ ಪಾಂಡೆ ಎಗರಿಸಿದರು. ಆದರೆ ಅದಾಗಲೇ ಆರ್ ಸಿಬಿ ವಿಜಯದ ಹೊಸ್ತಿಲಲ್ಲಿ ಬಂದು ನಿಂತಿತ್ತು. ಎಲ್ಸಿ ಪೆರ್ರಿ(7) ಮತ್ತು ರಿಚಾ ಘೋಷ್ (11) ಅವರು ಉಳಿದ ಕೆಲಸವನ್ನು ಆರಾಮವಾಗಿ ಮುಗಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸಾರಾ ಬ್ರೇಸ್ (23) ಕೊಂಚ ಪ್ರತಿರೋಧ ತೋರಿದರೂ ದೊಡ್ಡ ಮೊತ್ತದೆಡೆಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡ 19.3 ಓವರ್ ಗಳಲ್ಲಿ 141 ರನ್ ಗಳಿಗೆ ಆಲೌಟ್ ಆಯಿತು. ಬೆಂಗಳೂರು ಪರ ರೇಣುಕಾ ಸಿಂಗ್ ನತ್ತು ಜಾರ್ಜಿಯಾ ವಾರ್ ಹಂ ತಲಾ 3 ವಿಕೆಟ್ ಗಳಿಸಿದರು.