ನವದೆಹಲಿ: ಹರಿಯಾಣ ಪೊಲೀಸರು ಸಿಡಿಸಿದ ಅಶ್ರುವಾಯು ಪ್ರಯೋಗದಿಂದ ಕೆಲ ಪ್ರತಿಭಟನಾಕಾರರು ಗಾಯಗೊಂಡಿರುವುದರಿಂದ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈತ ನಾಯಕರೊಬ್ಬರು ಶುಕ್ರವಾರ ಸಂಜೆ ತಿಳಿಸಿದ್ದಾರೆ. ಕೆಲ ರೈತರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಜಾಥವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ.
ಹರಿಯಾಣ ಭದ್ರತಾ ಸಿಬ್ಬಂದಿ ಸಿಡಿಸಿದ ಅಶ್ರುವಾಯು ಪ್ರಯೋಗದಿಂದ ಐದರಿಂದ ಆರು ರೈತರು ಗಾಯಗೊಂಡಿದ್ದಾರೆ ಎಂದು ರೈತ ನಾಯಕರು ತಿಳಿಸಿದ್ದಾರೆ. 101 ರೈತರು ಶಂಭು ಗಡಿಯಿಂದ ಮಧ್ಯಾಹ್ನ 1 ಗಂಟೆ ಸುಮಾರಿನಲ್ಲಿ ದೆಹಲಿಯತ್ತ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಆದರೆ, ಸ್ವಲ್ಪ ದೂರ ಸಾಗುತ್ತಿದ್ದಂತೆ ಬ್ಯಾರಿಕೇಡ್ ಸರ್ಪಗಾವಲಿನ ಮೂಲಕ ಅವರನ್ನು ತಡೆಯಲಾಯಿತು.
ರೈತರು ಬ್ಯಾರಿಕೇಡ್ಗಳ ಬಳಿ ತಲುಪುತ್ತಿದ್ದಂತೆ ಅವರನ್ನು ಚದುರಿಸಲು ಹರಿಯಾಣ ಭದ್ರತಾ ಸಿಬ್ಬಂದಿ ಅಶ್ರುವಾಯು ಸಿಡಿಸಿದರು. ರೈತರು ವಾಪಸ್ ಹೋಗುವಂತೆ ಒತ್ತಾಯಿಸಿ ಹಲವು ಸುತ್ತು ಅಶ್ರುವಾಯು ಪ್ರಯೋಗ ನಡೆಸಲಾಯಿತು. ಇದರಿಂದ
ಕೆಲವು ರೈತರಿಗೆ ಗಾಯಗಳಾಗಿದ್ದು, ಅವರನ್ನು ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪ್ರತಿಭಟನಾಕಾರರು ಹೇಳಿದರು. ರಾಷ್ಟ್ರೀಯ ಹೆದ್ದಾರಿ 44 ರ ಅಡ್ಡಲಾಗಿ ಹಾಕಲಾದ ಪೊಲೀಸ್ ಬ್ಯಾರಿಕೇಡ್ನಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು IANS ಸುದ್ದಿಸಂಸ್ಥೆ ಹಂಚಿಕೊಂಡಿದೆ.
ಹರಿಯಾಣ ಸರ್ಕಾರವು ನಿಷೇಧಾಜ್ಞೆಗಳನ್ನು ವಿಧಿಸಿದೆ ಮತ್ತು ಅಂಬಾಲಾ ಜಿಲ್ಲೆಯ 11 ಹಳ್ಳಿಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಿದೆ. ಮುಂದಿನ ವಾರದವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ಹರಿಯಾಣ ಸರ್ಕಾರವು ನಿಷೇಧಾಜ್ಞೆಗಳನ್ನು ವಿಧಿಸಿದೆ ಮತ್ತು ಅಂಬಾಲಾ ಜಿಲ್ಲೆಯ 11 ಹಳ್ಳಿಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಿದೆ. ಮುಂದಿನ ವಾರದವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ.
ಫೆಬ್ರವರಿಯಲ್ಲಿ ದೆಹಲಿ ತಲುಪಲು ಪ್ರಯತ್ನಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ರೈತರನ್ನು ಭದ್ರತಾ ಸಿಬ್ಬಂದಿ ತಡೆದಿದ್ದರು. ಈ ಎರಡು ಪ್ರಯತ್ನಗಳ ನಂತರ ರಾಷ್ಟ್ರ ರಾಜಧಾನಿಯತ್ತ ಪ್ರತಿಭಟನಾ ಮೆರವಣಿಗೆಯನ್ನು ರೈತರು ಮತ್ತೆ ಆರಂಭಿಸಿದ್ದಾರೆ.