ಪ್ಯಾರಿಸ್: ಅಂಬಾಲಾದ ರೈತ ಕುಟುಂಬದವರಾದ ಸರಬ್ಜೋತ್ ಸಿಂಗ್ ಪುರುಷರ ೧೦ ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದರು. ಆದರೆ ಅಲ್ಲಿ ೫೭೭ ಅಂಕಗಳೊಂದಿಗೆ ೯ನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಬೇಕಾಯಿತು. ಸೋಮವಾರದ ಸ್ಪರ್ಧೆಯ ವೇಳೆ ತೀವ್ರ ಒತ್ತಡದಲ್ಲಿದ್ದುದಾಗಿ ಹೇಳಿದರು.
ಸ್ಪರ್ಧೆ ಅತ್ಯಂತ ಕಠಿನವಾಗಿತ್ತು. ಭಾರೀ ಒತ್ತಡವೂ ಇತ್ತು. ಈಗ ಅತ್ಯಂತ ಖುಷಿಯಾಗಿದೆ ಎಂಬುದಾಗಿ ಸರಬ್ಜೋತ್ ಹೇಳಿದರು.
ಸರಬ್ಜೋತ್ ಮೂಲತಃ ಫಟ್ಬಾಲರ್ ಆಗಿ ಕ್ರೀಡಾಂಗಣಕ್ಕೆ ಧುಮುಕ್ಕಿದ್ದರು. ಅವರಿಗೆ ಆಗ ೧೩ ವರ್ಷ. ಅಂಬಾಲಾದ ಭಗೀರಥ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿ ಆಗಿದ್ದರು. ಕ್ರಮೇಣ ಶೂಟಿಂಗ್ನಲ್ಲಿ ಆಸಕ್ತಿ ಹೆಚ್ಚಿತು. ಅದು ೨೦೧೪ರ ಸಮಯ. ಶೂಟಿಂಗ್ ಅತ್ಯಂತ ದುಬಾರಿ ಕ್ರೀಡೆ ಎಂಬುದು ತಂದೆ ಜಿತೇಂದರ್ ಸಿಂಗ್ ಅವರಿಗೆ ತಿಳಿದಿತ್ತು. ಸರಬ್ಜೋತ್ ಮನ ಒಲಿಸಲು ಪ್ರಯತ್ನಿಸಿ ವಿಫಲರಾದರು. ಅಭಿಷೇಕ್ ರಾಣಾ ಅವರ ಗರಡಿಯಲ್ಲಿ ಪಳಗಿದ ಸರಬ್ಜೋತ್ ಇಂದು ಪ್ಯಾರಿಸ್ ಜಯಿಸಿದ್ದಾರೆ!
ವಿಶ್ವ ಚಾಂಪಿಯನ್ಶಿಪ್ನಲ್ಲಿ ಒಂದು ಚಿನ್ನ, ವಿಶ್ವಕಪ್ನಲ್ಲಿ ೨ ಚಿನ್ನ, ಐಎಸ್ಎಸ್ಎಫ್ ಜೂ. ಕಪ್ನಲ್ಲಿ ಒಂದು ಚಿನ್ನ, ೨ ಬೆಳ್ಳಿ; ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಒಂದು ಚಿನ್ನ, ೨ ಕಂಚು; ಏಷ್ಯಾಡ್ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಸರಬ್ಜೋತ್ ಖಾತೆಯಲ್ಲಿದೆ. ಇದೀಗ ಒಲಿಂಪಿಕ್ಸ್ ಪದಕದ ಸರದಿ. ಅಲ್ಲಿಗೆ ಬರೋಬ್ಬರಿ ಒಂದು ಡಜನ್ ಪದಕಗಳಾದವು!