ಶಿಡ್ಲಘಟ್ಟ: “ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡಲೆಂದು ಬಂದೆ. ಜನರ ಸಹಕಾರದಿಂದ ಚುನಾವಣೆಗೆ ನಿಂತು ಜನರು ನಾಡಿ ಮಿಡಿತ ಅರಿತುಕೊಂಡಿದ್ದೇನೆ.ರೈತರು, ಯುವಕರು ಮತ್ತು ಬಡವರ ಶ್ರೇಯಸ್ಸಿಗೆ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿ, ಕ್ಷೇತ್ರದ ಅಭಿವೃದ್ಧಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಪುಟ್ಟು ಆಂಜನಪ್ಪ ತಿಳಿಸಿದರು.
ಅವರು ನಿನ್ನೆ ಅಜ್ಜ ಕದಿರೇನಹಳ್ಳಿ ತಮ್ಮ ನಿವಾಸದಲ್ಲಿ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ ನಡೆಸುತ್ತಿದೆ. ಶಿಡ್ಲಘಟ್ಟ ತಾಲೂಕಿಗೆ ಉತ್ತಮ ಭವಿಷ್ಯವಿದೆ.
ರಾಜ್ಯ ಸರ್ಕಾರ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರೂ, ಸ್ಥಾಪನೆಯಾಗಲಿರುವ ಕೈಗಾರಿಕಾ ಪ್ರದೇಶಗಳಿಂದ ಹೆಚ್ಚು ಉದ್ಯೋಗಗಳ ಸೃಷ್ಟಿಯಾಗಲಿದೆ. ರಾಜಧಾನಿಗೆ ಸಮೀಪವಿರುವ ಶಿಡ್ಲಘಟ್ಟ ಭವಿಷ್ಯದಲ್ಲಿ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಪುಟ್ಟು ಆಂಜನಪ್ಪ ತಿಳಿಸಿದರು.
ರಾಜ್ಯದಲ್ಲಿ ಮಳೆ ವಿಪರೀತವಾಗಿ ಆಗುತ್ತಿದೆ. ಇದರಿಂದ ಸ್ವಲ್ಪಮಟ್ಟಿನ ಅನಾಹುತಗಳು ಸೃಷ್ಟಿಯಾಗಿ ರೈತರು ಆತಂಕದಲ್ಲಿದ್ದಾರೆ. ಪ್ರಕೃತಿಯ ಜೊತೆಗೆ ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಹಿಂದಿನ ಕಾಲದಲ್ಲಿ ಕೇವಲ ಆಹಾರಧಾನ್ಯಗಳನ್ನು ಉತ್ಪಾದಿಸುವ ಮೂಲಕ ರೈತಾಪಿ ಜನರು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದರು.
ಆದರೆ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ವಾಣಿಜ್ಯ ಬೆಳೆಗಳನ್ನು ಅತಿ ಹೆಚ್ಚು ಬೆಳೆಯುವ ಮೂಲಕ ಆಹಾರ ಬೆಳೆಗಳನ್ನು ಬೆಳೆಯುವುದು ಕಡಿಮೆ ಮಾಡಿದ್ದಾರೆ. ನಮ್ಮ ಆಸೆ ಆಕಾಂಕ್ಷೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹಿರಿಯರನ್ನು ಗೌರವಿಸುವ ಮತ್ತು ಪ್ರಕೃತಿಯನ್ನು ಆರಾಧಿಸುವ ಮನೋಭಾವ ಪ್ರತಿ ಒಬ್ಬರಲ್ಲೂ ಮೂಡಬೇಕಿದೆ ಎಂದು ಪುಟ್ಟು ಆಂಜನಪ್ಪ ತಿಳಿಸಿದರು. ಗುರುಪೂರ್ಣಿಮೆಯ ಈ ದಿನ ಎಲ್ಲರೊಂದಿಗೂ ಸಹಭೋಜನ ಮಾಡುವ ಮೂಲಕ ನನ್ನ ಕೃತಜ್ಞತೆಗಳನ್ನು ಕ್ಷೇತ್ರದ ಜನರಿಗೆ ಅರ್ಪಿಸಿದ್ದೇನೆ ಎಂದು ಅವರು ತಿಳಿಸಿದರು.