ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ದೀರ್ಘ ಕಾಲದ ಬಿಡುವಿನ ಬಳಿಕ ತಂಡಕ್ಕೆ ಮರಳಿದ್ದು ಶುಕ್ರವಾರದಿಂದ ಶುರುವಾಗಲಿರುವ ಆಸ್ಪ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ಗೆ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ತಿಂಗಳು ಶರ್ಮ ಎರಡನೇ ಮಗುವಿಗೆ ತಂದೆಯಾಗಿದ್ದರು.
ಐದು ಪಂದ್ಯಗಳನ್ನೊಳಗೊಂಡ ಸರಣಿಯ ಮೊದಲನೇ ಪಂದ್ಯವನ್ನು 295 ರನ್ಗಳಿಂದ ಗೆದ್ದು 1-0 ಮುನ್ನಡೆ ಸಾಧಿಸಿರುವ ಭಾರತ ಎರಡನೇ ಜಯ ಸಾಧಿಸುವ ಉತ್ಸಾಹದಲ್ಲಿದೆ. ಅಡಿಲೇಡ್ನಲ್ಲಿ ಶುರುವಾಗಲಿರುವ ಎರಡನೇ ಪಂದ್ಯ ಪಿಂಕ್ ಬಾಲ್ ಟೆಸ್ಟಾಗಿದ್ದು, ಹಗಲು ರಾತ್ರಿ ನಡೆಯಲಿದೆ. ರೋಹಿತ್ ಶರ್ಮ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿಲ್ಲ ಎಂಬುದನ್ನು ಈಗಾಗಲೇ ಖಚಿತಪಡಿಸಿದ್ದಾರೆ.
ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರಂಭಿಕರಾದ ಕೆ.ಎಲ್.ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಜೋಡಿ ಅತ್ಯುತ್ತಮ ಜೊತೆಯಾಟ ನಿರ್ವಹಿಸಿ ತಂಡದ ಗೆಲುವಿನಲ್ಲಿಮುಖ್ಯ ಪಾತ್ರ ನಿರ್ವಹಿಸಿತ್ತು. ಅದೇ ಜೋಡಿಯನ್ನು ಎರಡನೇ ಪಂದ್ಯದಲ್ಲಿಯೂ ಆರಂಭಿಕರಾಗಿ ಮುಂದುವರಿಸುವ ಉದ್ದೇಶದಿಂದ, ತಂಡದ ಹಿತದೃಷ್ಟಿಯಿಂದ ರೋಹಿತ್ ಶರ್ಮ ತಾವು ಮಧ್ಯಮ ಕ್ರಮಾಂಕದಲ್ಲಿ ಆಡುವುದಾಗಿ ತಿಳಿಸಿದ್ದಾರೆ.