ಮುಂಬಯಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ – 2025, ಫೆಬ್ರವರಿ 19ರಂದು ಆರಂಭವಾಗಲಿದೆ. ಮೊದಲ ಪಂದ್ಯ ಅತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡದ ನಡುವೆ ಕರಾಚಿಯಲ್ಲಿ ನಡೆಯಲಿದೆ. ಭಾರತದ ಮೊದಲ ಪಂದ್ಯ ಬಾಂಗ್ಲಾದೇಶದೊಂದಿಗೆ ಫೆ.20ರಂದು ದುಬೈಯಲ್ಲಿ ನಡೆಯಲಿದೆ.ಚಾಂಪಿಯನ್ಸ್ ಟ್ರೋಫಿಗೆ ತಂಡದ ಆಯ್ಕೆಗೆ ಜನವರಿ 12ರ ಗಡುವನ್ನು ಐಸಿಸಿ ನೀಡಿದೆ. 15 ಆಟಗಾರರ ಪಟ್ಟಿಯನ್ನು ಈ ದಿನದೊಳಗೆ ಕಳುಹಿಸಬೇಕಾಗಿದ್ದು, ಫೆ.13ರವರೆಗೆ ತಂಡದಲ್ಲಿ ಬದಲಾವಣೆಯನ್ನು ಮಾಡಲು ಅವಕಾಶವಿದೆ. ಹಾಗಾಗಿ, ಇನ್ನು, ಐದು ದಿನದೊಳಗೆ ತಂಡವನ್ನು ಪ್ರಕಟಿಸಬೇಕಿದೆ.
ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದರೂ, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮತ್ತು ಪ್ರಮುಖ ಬ್ಯಾಟ್ಸಮಾನ್ ವಿರಾಟ್ ಕೊಹ್ಲಿ ಅವರನ್ನು ಕೈಬಿಡುವ ಸಾಧ್ಯತೆ ಕಮ್ಮಿ ಎಂದು ಹೇಳಲಾಗುತ್ತಿದೆ.ಆದರೆ, ಸಿಡ್ನಿ ಟೆಸ್ಟ್ ಪಂದ್ಯದ ಕೊನೆಯ ದಿನ, ಹಂಗಾಮಿ ನಾಯಕನಾಗಿದ್ದ ಜಸ್ಪೀತ್ ಬುಮ್ರಾ, ಎರಡನೇ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಚಾಂಪಿಯನ್ಸ್ ಟ್ರೋಫಿಗಿಂತ ಮುನ್ನ, ಇಂಗ್ಲೆಂಡ್ ತಂಡದ ವಿರುದ್ದ ಮೂರು ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಆಡಬೇಕಿದೆ.
ಹಾಗಾಗಿ, ಇಂಗ್ಲೆಂಡ್ ವಿರುದ್ದದ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಮುನ್ನ, ಭಾರತಕ್ಕೆ ಇಂಗ್ಲೆಂಡ್ ವಿರುದ್ದ ಸರಣಿ ಅಭ್ಯಾಸಕ್ಕಾಗಿ ನಿರ್ಣಾಯಕ ಆಗಿರುವುದರಿಂದ, ಇಂಗ್ಲೆಂಡ್ ವಿರುದ್ದದ ಸರಣಿಯ ತಂಡವನ್ನೇ ಚಾಂಪಿಯನ್ಸ್ ಟ್ರೋಫಿಗೂ ಆಡಿಸುವ ಸಾಧ್ಯತೆಯಿದೆ.ಹಾರ್ದಿಕ್ ಪಾಂಡ್ಯ, ಶ್ರೇಯಸ್ ಐಯ್ಯರ್, ಮೊಹಮ್ಮದ್ ಶಮಿ ತಂಡಕ್ಕೆ ವಾಪಸ್ ಆಗುವ ಸಾಧ್ಯತೆಯಿದೆ. ವಿಜಯ್ ಹಜಾರೆ ಟೂರ್ನಮೆಂಟ್ ನಲ್ಲಿ ಶ್ರೇಯಸ್ ಐಯ್ಯರ್ ಉತ್ತಮ ಲಯದಲ್ಲಿ ಇರುವುದರಿಂದ, ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.ಇಂಗ್ಲೆಂಡ್ ವಿರುದ್ದದ ಮೂರು ಏಕದಿನ ಪಂದ್ಯಗಳ ಪೈಕಿ, ಅಹಮದಾಬಾದ್ ನಲ್ಲಿ ಫೆ.12ರಂದು ನಡೆಯುವ ಕೊನೆಯ ಪಂದ್ಯದಲ್ಲಿ ಬುಮ್ರಾ ಅವರನ್ನು ಆಡಿಸುವ ಸಾಧ್ಯತೆಯಿದೆ. ಉಳಿದ ಎರಡು ಪಂದ್ಯಗಳಿಗೆ ಅವರಿಗೆ ವಿಶ್ರಾಂತಿ ನೀಡಲಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿವೆ.