ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಹೀನಾಯವಾಗಿ ಸೋತಾಗ ಭಾರತ ತಂಡದ ಬಗ್ಗೆ ಅನೇಕ ಟೀಕೆಗಳು ಕೇಳಿ ಬಂದಿದ್ದವು. ಹೀಗಾದಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿಯ ಕತೆಯೇನು ಎಂದು ಎಲ್ಲರೂ ಮಾತನಾಡಿಕೊಳ್ಳುವಂತಾಗಿತ್ತು. ಆದರೆ ಪರ್ತ್ ಟೆಸ್ಟ್ ಪಂದ್ಯವನ್ನು ಜಸ್ಪ್ರೀತ್ ಬುಮ್ರಾ ನೇತೃತ್ವದಲ್ಲಿ ಗೆದ್ದ ಟೀಂ ಇಂಡಿಯಾ ಎಲ್ಲರ ಬಾಯಿ ಮುಚ್ಚಿಸಿತು. ಆದರೆ ಆ ರೋಷಾವೇಶವೆಲ್ಲಾ ಒಂದೇ ಪಂದ್ಯಕ್ಕೆ ಸೀಮಿತವಾಗಿದ್ದು ಮಾತ್ರ ವಿಪರ್ಯಾಸ.
ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ರೋಹಿತ್ ಪಡೆ ಬ್ರಿಸ್ಬೇನ್ ನಲ್ಲಿ ಕಷ್ಟಪಟ್ಟು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಒಂದು ವೇಳೆ ಮಳೆ ಕಾಟ ಇಲ್ಲದೇ ಹೋಗಿದ್ದಿದ್ದರೆ ಆ ಪಂದ್ಯದಲ್ಲೂ ಆಸೀಸ್ ತಂಡ ರೋಹಿತ್ ಬಳಗವನ್ನು ಪರಾಭವಗೊಳಿಸುತ್ತಿತ್ತು. ಇನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡಿನಲ್ಲಿ ನಡೆದ ಪಂದ್ಯದಲ್ಲಂತೂ ಭಾರತ ತಂಡ ಸಂಕಲ್ಪವೇ ಇಲ್ಲದಂತೆ ಆಡಿದ್ದರಿಂದ ಆಸ್ಟ್ರೇಲಿಯಾ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.
ಮೆಲ್ಬರ್ನ್ ಟೆಸ್ಟ್ ಪಂದ್ಯವನ್ನೂ ಸೋತ ಬಳಿಕ ಟೀಂ ಇಂಡಿಯಾ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯದ ಬಗ್ಗೆ ಪುಂಖಾನುಪುಂಖಾ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆಯೇ ಟೀಮ್ ಇಂಡಿಯಾದ ಪರಿವರ್ತಿನೆಯ ಸಮಯದಲ್ಲಿ ತಂಡದ ನಿರ್ವಹಣೆಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸಹಾಯಕ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಚರ್ಚೆ ಆರಂಭವಾಗಿದೆ.