ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಿಕ ಪಂದ್ಯ ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಫೆಬ್ಪವರಿ 6 ಗುರುವಾರದಂದು ನಡೆಯಲಿದೆ.ಮುಖ್ಯವಾಗಿ ಈ ಸರಣಿಯು ಉಭಯ ತಂಡಗಳ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಸಿದ್ಧತೆಗೆ ವೇದಿಕೆಯಾಗಿದೆ. ಅದರಲ್ಲೂ ಬಿಸಿಸಿಐ ಆಯ್ಕೆ ಮಂಡಳಿ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಗಳು ಅನುಭವಿ ತಾರೆಗಳ ಫಾರ್ಮ್ ಮತ್ತು ಫಿಟ್ನೆಸ್ ಮೇಲೆ ತೀವ್ರ ನಿಗಾ ಇಟ್ಟಿದ್ದು, ಚಾಂಪಿಯನ್ಸ್ ಟ್ರೋಫಿಗೂ ಮುನ್ನ ತಂಡದ ಸಂಯೋಜನೆಯನ್ನು ಖಾತರಿಪಡಿಸಿಕೊಳ್ಳುವ ಇರಾದೆ ಹೊಂದಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ತೀವ್ರ ಪರಿಶೀಲನೆಗೆ ಒಳಗಾಗಿದ್ದಾರೆ. ಕಳೆದ ತಿಂಗಳ ದೇಶೀಯ ಟೂರ್ನಿ ರಣಜಿ ಟ್ರೋಫಿಯಲ್ಲೂ ನೀರಸ ಪ್ರದರ್ಶನ ನೀಡಿದ್ದಾರೆ. ಏತನ್ಮಧ್ಯೆ ಬಿಸಿಸಿಐ ಯು ರೋಹಿತ್ ಶರ್ಮಾ ಅವರ ಬಳಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಭವಿಷ್ಯದ ಯೋಜನೆಯ ಬಗ್ಗೆ ಚರ್ಚಿಸುವಂತೆ ಈಗಾಗಲೇ ಸೂಚನೆ ನೀಡಿದೆ ಎಂದು ವರದಿಗಳು ಹೇಳುತ್ತಿವೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ ಇಬ್ಬರು ಹಿರಿಯರಿಗೂ ಕೊನೆಯ ಅವಕಾಶ ಆಗುವುದು ಖಚಿತ. ಹಲವು ವರ್ಷಗಳಿಂದ ಏಕದಿನ ಮಾದರಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಇವರಿಬ್ಬರೂ ಹೇಗೆ ತಮ್ಮ ತೋಳ್ಬಲ ತೋರಲಿದ್ದಾರೆ ಎಂಬುದನ್ನು ಕಾದು ನೋಡಬೇಕು.