ಬೆಳಗಾವಿ: ಪಂಚಮಸಾಲಿ ಸಮುದಾಯದ ಹೋರಾಟದ ಮೇಲೆ ನಡೆದ ಲಾಠಿ ಚಾರ್ಜ್ ಪ್ರಕರಣ ಇಂದು ವಿಧಾನಸಭೆ ಕಲಾಪದ ಆರಂಭದಲ್ಲೆ ಪ್ರತಿಧ್ವನಿಸಿ ವಿಪಕ್ಷ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರಸಂಗ ನಡೆಯಿತು.ಇಂದು ಸದನದ ಕಲಾಪ ನಿಗದಿತ ಸಮಯಕ್ಕಿಂತ ಮುಕ್ಕಾಲು ಗಂಟೆ ತಡವಾಗಿ ಆರಂಭವಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಮಂಗಳವಾರ ಪಂಚಮ ಸಾಲಿ ಸಮುದಾಯದವರು ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು.
ಇದೊಂದು ಗೂಂಡಾ ಸರ್ಕಾರ, ಮಾನವೀಯತೆಯಿಲ್ಲದ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಜೋರಾಗಿ ಘೋಷಣೆ ಕೂಗತೊಡಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಇಬ್ಬರು ಮಾಜಿ ಶಾಸಕರು ನಮಗಿನ್ನ ಮುಂಚೆ ಸದನಕ್ಕೆ ಬಂದಿದ್ದವರು ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಮೃತರಿಗೆ ಸಂತಾಪ ಸೂಚಿಸಿದ ನಂತರ ನೀವು ಬೇಕಾದರೆ ಬೊಬ್ಬೆ ಹೊಡೆಯಿರಿ, ಪ್ರತಿಭಟನೆ ಮಾಡಿ ಎಂದು ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದರು.
ಒಂದು ಹಂತದಲ್ಲಿ ಬಿಜೆಪಿಯವರ ಪ್ರತಿಭಟನೆಯ ಕೂಗು ಜೋರಾಗಿತ್ತಾದರೂ ಸಭಾಧ್ಯಕ್ಷರ ಮಾತುಗಳ ಆಲಿಸಿ ಸಂತಾಪ ಸೂಚಕದ ನಿರ್ಣಯದ ಗಂಭೀರತೆಯನ್ನು ಅರಿತು ತಮ್ಮ ಘೋಷಣೆಗಳನ್ನು ನಿಲ್ಲಿಸಿ ತಮ್ಮ ತಮ್ಮ ಆಸನಗಳಲ್ಲಿ ಆಸಿನರಾದರು.ನಂತರ ಸಭಾಧ್ಯಕ್ಷರು ಇತ್ತೀಚೆಗೆ ನಿಧನರಾದ ಕೊಳ್ಳೆಗಾಲದ ಮಾಜಿ ಶಾಸಕ ಎಸ್.ಜಯಣ್ಣ ಹಾಗೂ ಇಂದು ನಿಧನರಾಗಿರುವ ಬೆಳ್ಳಾವಿ ಕ್ಷೇತ್ರದ ಮಾಜಿಶಾಸಕ ಆರ್. ನಾರಾಯಣ್ ರವರ ನಿಧನಕ್ಕೆ ಸಂತಾಪ ನಿರ್ಣಯ ಮಂಡಿಸಿ ಮೃತರಿಬ್ಬರ ಸೇವಾ ಕಾರ್ಯಗಳನ್ನು ಸದನಕ್ಕೆ ವಿವರಿಸಿದರು.ಈ ಸಂದರ್ಭದಲ್ಲಿ ಸಭಾಧ್ಯಕ್ಷರ ನಿರ್ಣಯ ಪರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಮೃತ ಶಾಸಕರಿಬ್ಬರ ಬಗ್ಗೆ ಮಾತನಾಡಿ ಅವರ ಸೇವಾ ಕಾರ್ಯಗಳನ್ನು ಸ್ಮರಿಸಿದರು.