ಗದಗ: ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ಪಲ್ಲವಿ ಲಾಡ್ಜ್ನಲ್ಲಿ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡಿರುವ ಇಂಜಿನಿಯರ್. ಇಂದು (ಡಿಸೆಂ 03) ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದ ಶಂಕರಗೌಡ ಪಾಟೀಲ್ ನಗರದ ಪಲ್ಲವಿ ಲಾಡ್ಜ್ನ ರೂಮ್ ನಂಬರ್ 513ರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕರಗೌಡ ಪಾಟೀಲ್ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದು, ಈ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಅನುಮಾನ ವ್ಯಕ್ತಪಡಿಸಿದ ಸಹೋದರ
ಇನ್ನು ಈ ಸಂಬಂಧ ಮೃತ ಸಹೋದರ ಕೃಷ್ಣಗೌಡ ಪ್ರತಿಕ್ರಿಯಿಸಿದ್ದು, ನೇಣು ಹಾಕಿ ಕೊಲೆ ಮಾಡಿದ್ದಾರೆ. ಸಾಲ ಇಲ್ಲ. ಸಾಕಷ್ಟು ಆಸ್ತಿ ಇದೆ. ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಲ್ಲ. ಸಾಲಕ್ಕೆ ಜಾಮೀನು ಆಗಿದ್ದ ಆ ವಿಷಯಕ್ಕಾದ್ರೂ ಆಗಿರಬಹುದು. ಜಿಲ್ಲಾಧಿಕಾರಿಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಪ್ರಮೋಶನಕ್ಕೆನಾದ್ರೂ ವ್ಯತ್ಯಾಸ ಆಗಿದೆಯೋ ಗೊತ್ತಿಲ್ಲ. ಈ ಮೂರು ವಿಷಯಕ್ಕೆ ಸಾವು ಅಂತ ಅನುಮಾನ ಇದೆ ಎಂದಿದ್ದಾರೆ.
ಸಾಲಕ್ಕೆ ಹೆದರುವ ಮನುಷ್ಯ ಅವನಲ್ಲ. ನೇಣು ಹಾಕಿಕೊಂಡ ಹಗ್ಗ ಹೊಸದು ಇದೆ. ಹೀಗಾಗಿ ಯಾರಾದರೈ ಊರಲು ಹಾಕಿದ್ದಾರೆ ಎಂದು ಆರೋಪಿಸಿರುವ ಕೃಷ್ಣಗೌಡ, ನಿರ್ಮಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ನನಗೆ ಆತ್ಮಹತ್ಯೆ ಮಾಡಿಕೊಂಡ ರೂಂಗೆ ಪೊಲೀಸರು ಬಿಡಲಿಲ್ಲ. ಹೀಗಾಗಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ಇದೆ ಎಂದು ತಿಳಿಸಿದ್ದಾರೆ.
ಬೀದರ್ನಲ್ಲಿ ಯುವ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಗುತ್ತಿಗೆದಾರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ವಿರೋಧ ಪಕ್ಷಗಳು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿವೆ. ಈ ಬಗ್ಗೆ ರಾಜಕೀಯವಾಗಿ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.
ಇದೆಲ್ಲದರ ಮಧ್ಯ ಇದೀಗ ನಿರ್ಮಿತಿ ಕೇಂದ್ರದ ಇಂಜಿಯನರ್ ಆತ್ಮಹತ್ಯೆ ಪ್ರಕರಣ ಬೆಳಗೆ ಬಂದಿದ್ದು, ಈ ಪ್ರಕರಣ ಮುಂದೆ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.