ಬೆಂಗಳೂರು: ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ಒಂದೊಂದು ರೀತಿಯ ವಿಷಯವಸ್ತುವಿನ ಆಧಾರದಲ್ಲಿ ತೋಟಗಾರಿಕೆ ಇಲಾಖೆ ಬೆಂಗಳೂರಿನ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತದೆ. ಅದರಂತೆ, ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಿದ್ದತೆ ನಡೆಸಿದೆ.
ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ಜನವರಿ 16 ರಿಂದ 26ರವರೆಗೆ 11 ದಿನಗಳ ಕಾಲ ಆಯೋಜಿಸುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಜೀವನ ಆಧಾರಿತ ವಿಷಯ ಹಾಗೂ ರಾಮಾಯಣ ಮಹಾಕಾವ್ಯವನ್ನು ಆಕರ್ಷಕವಾಗಿ ಪುಷ್ಪಗಳಲ್ಲಿ ಅರಳಿಸಲು ತೀರ್ಮಾನಿಸಲಾಗಿದೆ.
ಫಲಪುಷ್ಪ ನೋಡಲು ಬರುವ ಪ್ರವಾಸಿಗರು ಮತ್ತು ಬೆಂಗಳೂರಿನ ಜನತೆ ಮಹರ್ಷಿ ವಾಲ್ಮೀಕಿ ವಿಷಯಾಧರಿತ ಹೂವಿನ ಪ್ರತಿಕೃತಿ ಹಾಗೂ ರಾಮಾಯಣದ ಪ್ರಮುಖ ಘಟನೆಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ. ಹೂ ಅಲಂಕಾರಕ್ಕಾಗಿ ದೇಶ ವಿದೇಶಗಳಿಂದ ಹೂವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.