ಬೆಂಗಳೂರು: ತೋಟಗಾರಿಕಾ ಇಲಾಖೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಂದಿನ ತಿಂಗಳು ಅಗಸ್ಟ್ ೮ ರಿಂದ ಅಗಸ್ಟ್ ೧೮ ರವರೆಗೆ ನಡೆಯಲಿರುವ ಇತಿಹಾಸ ಪ್ರಸಿದ್ಧ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಈ ವರ್ಷದ ಕೇಂದ್ರ ವಿಷಯವಾಗಿ ಭಾರತ ಭಾಗ್ಯವಿಧಾತ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಹೂಗಳಲ್ಲಿ ಅನಾವರಣಗಳಿಸಲಿದೆ.
ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿ ಯಾಗಿ ನಡೆಸಲು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕುಸುಮ. ಕೆ ಮತ್ತು ತೋಟಗಾರಿಕೆ ಜಂಟಿ ನಿರ್ದೇಶಕ ಡಾ. ಕೆ. ಎಂ. ಜಗದೀಶ್ ರವರು ದಲಿತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಕೋರಿದರು.
ಭಾರತ ಭಾಗ್ಯವಿಧಾತ ಡಾ.ಬಿ.ಆರ್ ಅಂಬೇಡ್ಕರ್ ರವರ ಪುಷ್ಪ ಪ್ರದರ್ಶನಕ್ಕೆ ಇಲ್ಲಿಯವರೆಗೆ ಕೈಗೊಂಡಿರುವ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು ನಂತರ ಮುಖಂಡರುಗಳ ಸಲಹೆ ಸೂಚನೆಗಳನ್ನು ಆಲಿಸಿ ಕೆಲವು ಮುಖಂಡರು ಕೊಟ್ಟ ಸಲಹೆಗಳನ್ನು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪಡೆದುಕೊಂಡರು.
ಒಟ್ಟಾರೆ ಈ ಒಂದು ಅಭೂತಪೂರ್ವ ಕಾರ್ಯಕ್ರಮವನ್ನು ಯಶಸ್ವಿ ಮಾಡಲು ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ನೀಡುವುದರ ಜೊತೆಗೆ ಹೆಚ್ಚಿನ ಪ್ರಚಾರ ನೀಡಿ ದಾಖಲೆ ಮಟ್ಟದಲ್ಲಿ ಶಾಲಾ ಮಕ್ಕಳು, ಮಹಿಳೆಯರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಪುಷ್ಪ ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಮನವಿ ಮಾಡಿದರು.
ಲಾಲ್ಬಾಗ್ ಸಸ್ಯೋದ್ಯಾನದ ಜಂಟಿ ನಿರ್ದೇಶಕ ಎಂ ಜಗದೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಬಹು ನಿರೀಕ್ಷಿತ ಕಾರ್ಯಕ್ರಮಕ್ಕೆ ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಪುಷ್ಪ ಪ್ರದರ್ಶನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಪುಷ್ಪ ನಮನ ಸಲ್ಲಿಸಲು ನಾವು ನಿರ್ಧರಿಸಿದ್ದೇವೆ. ಆದರೆ, ನಾವು ಇನ್ನೂ ಈ ಪರಿಕಲ್ಪನೆಯನ್ನು ಅಂತಿಮಗೊಳಿಸಲು ಹಲವು ಹಿರಿಯ ಚಿಂತಕರು, ಸಾಹಿತಿಗಳು, ಬರಹಗಾರರು, ಹೋರಾಟಗಾರರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಡಾ ಅಂಬೇಡ್ಕರ್ ಅವರ ಪರಂಪರೆಯ ಸಮಗ್ರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಚಿತ್ರಿಸಲು ಹಲವಾರು ತಜ್ಞರು ಮತ್ತು ಸಂಶೋಧಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಭಾಗವಾಗಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಜೀವನ ಪಯಣದಲ್ಲಿನ ವಿವಿಧ ಮೈಲಿಗಲ್ಲುಗಳು ಮತ್ತು ಅವರ ಪ್ರಭಾವಶಾಲಿ ಭಾಷಣಗಳನ್ನು ಚಿತ್ರಿಸುವ ವೀಡಿಯೊಗಳನ್ನು ಪ್ರದರ್ಶಿಸಲು ಲಾಲ್ಬಾಗ್ ಉದ್ಯಾನದಾದ್ಯಂತ ಸುಮಾರು ಎಂಟು ಪರದೆ ಸ್ಥಾಪಿಸುವುದಾಗಿ ತಿಳಿಸಿದರು.ಗ್ಲಾಸ್ಹೌಸ್ನಲ್ಲಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಾಲ್ಯದಿಂದ ಅವರ ನಂತರದ ವರ್ಷಗಳವರೆಗಿನ ಜೀವನ ಪಯಣವನ್ನು ಜೀವನ ದರ್ಶನ’ದಂತೆ ಚಿತ್ರಿಸುವ ಪ್ರದರ್ಶನಗಳನ್ನು ನೀಡಲು ಆಯೋಜಿಸಿರುವ ಬಗ್ಗೆ ಮತ್ತು ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಲ್ಲಿ ಅಂಬೇಡ್ಕರ್ ಅವರನ್ನು ನೋಡುವ ಜೊತೆಗೆ ಪರದೆಗಳಲ್ಲಿಯೂ ಅವರ ಆಯ್ದ ಕೆಲವು ಭಾಷಣಗಳನ್ನು ಕೇಳಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಹಲವಾರು ದಲಿತ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಿ ಚರ್ಚೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಜೊತೆಗೆ ಕಾರ್ಯಕ್ರಮದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಿರ್ಧಾರಿಸಿದರು.