ಬೆಂಗಳೂರು: ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಹಾಗಾಗಿ ಆರ್ಆರ್ ನಗರ ಠಾಣೆಯ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ. ಕನ್ನಡದ ‘ಮುದ್ದುಲಕ್ಷ್ಮಿ’ ಸೇರಿದಂತೆ ಹಲವು ಸೀರಿಯಲ್ನಲ್ಲಿ ಚರಿತ್ ನಟಿಸಿದ್ದಾರೆ. ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ತನಗೆ ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪ ಈಗ ಚರಿತ್ ಬಾಳಪ್ಪ ಮೇಲೆ ಎದುರಾಗಿದೆ.
ಪ್ರೀತಿಸುತ್ತೇನೆ ಅಂತ ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅಷ್ಟಲ್ಲದೇ ಯುವತಿ ಬಳಿ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪಗಳು ಕೇಳಿಬಂದಿವೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಚರಿತ್ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ. ಡಿವೋರ್ಸ್ ನಂತರವೂ ಅವರು ಮಾಜಿ ಪತ್ನಿಯ ಜೊತೆ ಕಿರಿಕ್ ಮಾಡಿಕೊಂಡಿದ್ದರು.
2017ರಲ್ಲಿ ನಟಿ ಮಂಜು ಜೊತೆ ಚರಿತ್ ಬಾಳಪ್ಪ ಅವರಿಗೆ ವಿವಾಹ ಆಗಿತ್ತು. 2022ರ ಬಳಿಕ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ನಂತರ ಅವರಿಬ್ಬರು ನ್ಯಾಯಾಲಯದಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. ಕೋರ್ಟ್ ಆಜ್ಞೆಯಂತೆ ಡೈವರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಮಾಜಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ ಎಂದು ಚರಿತ್ ಬಾಳಪ್ಪ ವಿರುದ್ಧ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.