ಬೆಂಗಳೂರು: ರಾಜ್ಯದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೆಲ ಅಧಿಕಾರಿಗಳ ಮನೆ ಕಚೇರಿಗಳಲ್ಲಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.ಅಬಕಾರಿ ಇಲಾಖೆ, ಟೌನ್ ಪ್ಲಾನಿಂಗ್ ಇಲಾಖೆ, ಕಾವೇರಿ ನೀರಾವರಿ ನಿಗಮ ಮತ್ತು ಭೂಗರ್ಭ ಇಲಾಖೆಯ ನಾಲ್ಕು ಅಧಿಕಾರಿಗಳ ಮನೆ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಲಾಗಿದೆ.
ಸುಮಾರು 25 ಜಾಗಗಳಲ್ಲಿ ಮನೆಗಳ ಮೇಲೆ ದಾಳಿ ನಡೆದಿದ್ದು, ಮನೆಯಲ್ಲಿ ಪರಿಶೀಲಿಸುತ್ತಿರುವ ಅಧಿಕಾರಿಗಳಿಗೆ ಕೆಲವರ ಮನೆಯಲ್ಲಿ ಅಪಾರ ಮೊತ್ತದ ನಗದು, ಚಿನ್ನಾಭರಣ, ಆಸ್ತಿಪತ್ರಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಚಿಕ್ಕಬಳ್ಳಾಪುರದ ಭೂಗರ್ಭ ಇಲಾಖೆಯ ಕೃಷ್ಣವೇಣಿ ಎಂಬುವರ ಮನೆ, ಮಂಡ್ಯದ ಕಾವೇರಿ ನೀರಾವರಿ ನಿಗಮದ ಎಂ.ಡಿ. ಮಹೇಶ್, ಟೌನ್ ಪ್ಲಾನಿಂಗ್ ನಿರ್ದೇಶಕ ಎನ್ ಕೆ ತಿಪ್ಪೇಸ್ವಾಮಿ ಮತ್ತು ಎಕ್ಸೈಸ್ ಸೂಪೇರಿಂಟೆಂಡೆಂಟ್ ಮೋಹನ್ ರವರ ಮನೆಗಳ ಮೇಲೆ ದಾಳಿ ನಡೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿರುತ್ತಾರೆ.
ಬೆಂಗಳೂರಿನ ಬನಶಂಕರಿಯ ಮೂರನೇ ಹಂತದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಅಧಿಕಾರಿ ತಿಪ್ಪೇಸ್ವಾಮಿ ಅವರ ಮನೆ ಮೇಲೆ ದಾಳಿ ನಡೆಸಿದಾಗ ಅಪಾರ ಮೊತ್ತದ ಚಿನ್ನ ಮತ್ತು ನಗದು ಪತ್ತೆಯಾಗಿದೆ ಎಂದು ಹೇಳಲಾಗಿದೆ.ಚಿನ್ನದ ಮೊತ್ತ ಮತ್ತು ಮೌಲ್ಯ ತಿಳಿಯಲು ಅಕ್ಕಸಾಲಿಗರನ್ನು ಅಧಿಕಾರಿಗಳು ಕರೆಸಿದ್ದು, ಚಿನ್ನದ ತೂಕ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಅವರ ಬೆಂಗಳೂರು ಮಂಡ್ಯ ಜಿಲ್ಲೆ ಮಳವಳ್ಳಿ ಹಾಗೂ ಮೈಸೂರು ಮನೆಗಳ ಮೇಲೂ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.ಮಂಡ್ಯದ ಪೆಟ್ರೋಲ್ ಬಂಕ್ ಒಂದರ ಮೇಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಗಳಿಕೆಗಿಂತ ಅಪಾರ ಮೊತ್ತದ ಆಸ್ತಿಪಾಸ್ತಿ ಹೊಂದಿರುವ ಆರೋಪದ ಮೇಲೆ ಅಕ್ರಮ ಗಳಿಕೆ ಪತ್ತೆ ಹಚ್ಚಲು ಈ ದಾಳಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.