ಸತ್ಯದ ಮಾರ್ಗದಲ್ಲಿ ನಡೆಯುವುದು ದೇವರ ಪೂಜೆಗಿಂತ ದೊಡ್ಡದು. ಸತ್ಯ ಇದ್ದಲ್ಲಿ ಜ್ಞಾನ ಇರುತ್ತದೆ ಎಂಬುದು ನಿಜವಾದ ಸಂಗತಿ. ಸತ್ಯ ಇಲ್ಲದೆ ನಿಜವಾದ ಅರಿವು. ಅಂತರಂಗದಲ್ಲಿ ಜ್ಞಾನ ಇರಲು ಸಾಧ್ಯವಿಲ್ಲ. ನಾವು ಅಸಾಧ್ಯವಾದದ್ದನ್ನು ಸಾಧಿಸಬೇಕೆಂದಿದ್ದರೆ ಊಹೆಗೂ ನಿಲುಕದ ವಿಚಾರಗಳ ಬಗ್ಗೆ ಯೋಚಿಸಬೇಕು. ಜೀವನ ಒಂದು ಸುದೀರ್ಘಪಯಣ ಆ ಪಯಣಕ್ಕೆ ಸಿದ್ಧ ನಕಾಶೆ ಇರುವುದಿಲ್ಲ.
ಅದನ್ನು ನಾವೇ ರೂಪಿಸಿಕೊಳ್ಳಬೇಕು ಹಾಗೂ ಸುರಕ್ಷಿತವಾಗಿ ಗುರಿಯನ್ನು ತಲುಪಿಸಬೇಕು. ದೃಢ ಸಂಕಲ್ಪವಿರುವ ವ್ಯಕ್ತಿ ಮಾತ್ರ ತನ್ನ ಕೆಲಸದಲ್ಲಿ ಸಾಧನೆ ಮಾಡುವ ಶಕ್ತಿ ಪಡೆಯುತ್ತಾನೆ. ತ್ಯಾಗ ಪ್ರೀತಿ ಕರುಣೆ ಸಮತಾ ಪ್ರಜ್ಞಾ ಪ್ರಮಾಣಿಕತೆಯೇ ನಿಜವಾದ ಶಿಕ್ಷಣ. ಕಮ್ಮಿ ಮಾತು ಸಮಯೋಚಿತ ಕಾರ್ಯ ಗೆಲುವಿನ ಅಗತ್ಯ, ಗುಣಗಳು, ಆಡಿದಂತೆ ಮಾಡುವವನು ರೂಢಿಯೊಳಗುತ್ತಮನು. ಮತ್ತೆ ಮತ್ತೆ ಪ್ರಯತ್ನಿಸು, ನೀ ಬಯಸಿದಂತೆ ನೀನಾಗುವೆ.
ಕಲ್ಲ ಮನೆಯಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ,
ದೇವರೆತ್ತ ಹೋದರೊ?
ಪ್ರಾಣಪ್ರತಿಷ್ಠೆಯ ಮಾಡಿದವಂಗೆ
ನಾಯಕನರಕ ಗುಹೇಶ್ವರಾ
-ಅಲ್ಲಮ ಪ್ರಭುದೇವರು
ಕಲ್ಲು ದೇವರು ದೇವರಲ್ಲ
ಮಣ್ಣು ದೇವರು ದೇವರಲ್ಲ
ಮರದ ದೇವರು ದೇವರಲ್ಲ
ಪಂಚಲೋಹದಿಂದ ಮಾಡಿದ
ದೇವರು ದೇವರಲ್ಲ
ಸೋತು ಬಂದ ರಾಮೇಶ್ವರ
ಗೋಕರ್ಣ ಕಾಶಿ ಕೇದಾರ
ಮೊದಲಾದ ಪುಣ್ಯ ತೀರ್ಥ
ಕ್ಷೇತ್ರಗಳಲ್ಲಿರುವ ದೇವರುಗಳು
ದೇವರಲ್ಲ
ತನ್ನ ತಾನರಿದು ತಾನಾರೆಂದು
ತಿಳಿದೆಡೆ ತನಗೆ ತಾನೇ ದೇವ
ನೋಡ ಅಪ್ರಮಾಣ
ಕೂಡಲಸಂಗಮದೇವ….
ಜಗಜ್ಯೋತಿ ಬಸವಣ್ಣ
ಇಂಥ ನುಡಿಗಳನ್ನು ತಮ್ಮ ಬದುಕಿನುದ್ದಕ್ಕೂ ನುಡಿ-ನಡೆಯನ್ನು ಒಂದಾಗಿಸಿಕೊಂಡು ಸಾಗುತ್ತಿದ್ದಾರೆ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – ಮಂಡ್ಯದ ಸಮ್ಮೇಳನಾಧ್ಯಕ್ಷರಾದ ನಾಡೋಜ ಡಾ.ಗೊ.ರು. ಚನ್ನಬಸಪ್ಪರವರು.ಭಾವಶುದ್ದಿ, ಸತ್ವನಿಷ್ಠೆ, ಸತ್ಯನಿಷ್ಠೆ, ಅನುಭಾವಸಿದ್ದಿ, ಕರ್ಮ ಯೋಗದಲ್ಲಿಯೇ ಬದುಕನ್ನು ಕಟ್ಟಿಕೊಂಡಿರುವ ಕಾರ್ಯನಿಷ್ಠೆ, ಇವೆಲ್ಲಕ್ಕೂ ಇಂಬುಕೊಡುವಂತೆ ತಮ್ಮೆಲ್ಲ ಕ್ರಿಯಾತ್ಮಕಕೊ ಆಯಾಮಗಳಿಗೂ ಸಾಹಿತ್ಯದ ಬಹುಮುಖ ಪ್ರಕಾರಗಳನ್ನು ಆವರಿಸಿಕೊಂಡು. ಆರಾಧಿಸಿಕೊಂಡು ಬರುತ್ತಿರುವ ಅತ್ಯುನ್ನತ ಸ್ಥಾನಸಿದ್ಧಿ ಶರಣ, ಸಂತ ಸಜ್ಜನಿಕೆಯ ಯೋಗಿ ನಮ್ಮೆಲ್ಲರ ಹೆಮ್ಮೆಯ ಶುಭ್ರವಸ್ತ್ರದಾರಿ ಗೊ.ರು.ಚರವರು.
ಶರಣ ಪರಂಪರೆಯ ಪರಿಚಾರಕರು, ಜಾನಪದ ತಪಸ್ವಿ, ಗ್ರಾಮ ಪ್ರೇಮಿ ಹೊಲಕೆಲ್ಲ ಹೊನ್ನ ಬಿತ್ತಿದವರು. ಹಳ್ಳಿ ಸೊಗಡಿನ ಭೀಷ್ಮ, ಸವ್ಯಸಾಚಿ, ಸಂಸ್ಕೃತಿ ಚಿಂತಕ, ಸ್ವಚ್ಛ ತಿಳಿ ಶುದ್ಧ . ಶುಭ್ರ ವ್ಯಕ್ತಿತ್ವ. ಎಲ್ಲರೊಳಗೊಂದಾದವರು ಹೀಗೆ ಇನ್ನು ಹತ್ತಾರು ಬಿರುದುಗಳು ಜನ ಇಷ್ಟಪಟ್ಟು ಕರೆಯುತ್ತಾರೆ. ಆದರೆ ಗೊ.ರು.ಚರವರು ಮಾತ್ರ ನಗು ನಗುತ್ತಾ ಶಾಂತ ಚಿತ್ತರಾಗಿರುತ್ತಾರೆ. ಸರಳತೆಯ ಮೂರ್ತಿ ಗೊ.ರು. ಚನ್ನಬಸಪ್ಪರವರ ಪೂರ್ಣ ಹೆಸರು ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ. ಜನನ 18 ಮೇ 1930 ಗೊಂಡೇದಹಳ್ಳಿ,, ತರೀಕೆರೆ ತಾಲೂಕು. ಚಿಕ್ಕಮಗಳೂರು ಜಿಲ್ಲೆ. ತಂದೆ ರುದ್ರಪ್ಪ ಗಿರಿಗೌಡರ. ತಾಯಿ ಅಕ್ಕಮ್ಮರುದ್ರಪ್ಪ. ಹಡಗಲು ತಿಮ್ಮಾಪುರ. ಅಜ್ಜಂಪುರ. ಬೀರೂರುಗಳಲ್ಲಿ ಶಿಕ್ಷಣ. 1944-48 ರವರಿಗೆ ಸ್ವಾತಂತ್ರ್ಯ ಚಳುವಳಿಯಗಳಲ್ಲಿ ಭಾಗಿಯಾಗಿ ಅಜ್ಜಂಪುರ, ಬೀರೂರು ಕಡೂರು, ಮಾಯಕೊಂಡದೆಲ್ಲೆಡೆ ಚಿರಪರಿಚಿತರಾದರು. ವಿನೋಬಾ ಭಾವೆ ಅವರಿಂದ ಪ್ರಭಾವಿತರಾದರು. ಮಲ್ಲಮ್ಮ ಬಾಳ ಸಂಗಾತಿ. ಅಶೋಕ,ಮುಕ್ತಾ ಶಿವಸ್ವಾಮಿ ಮೂರು ಮಕ್ಕಳು ತುಂಬು ಸಂತೃಪ್ತಿಯ ಬದುಕು ಅನುಭವಿಸಿದ್ದಾರೆ.
1948 ರಿಂದ 1988 ಮೇ 18ರವರೆಗೆ ಸರ್ಕಾರಿ ಸೇವೆಯಲ್ಲಿದ್ದು, ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಉಪಾಧ್ಯಾಯರಾಗಿದ್ದರು. ಅಲ್ಲಿಂದ ಸಮಾಜ ಶಿಕ್ಷಣ ವಿಸ್ತರಣಾಧಿಕಾರಿ. ಸಮಾಜ ಶಿಕ್ಷಣ ತರಬೇತಿ- ಗಾಂಧಿ ಗ್ರಾಮ, ಸಹಾಯಕ ಮತ್ತು ಉಪಸಂಪಾದಕರು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಪಾದಕರು, ಭಾರತ ಜನಸಂಖ್ಯಾ ಯೋಜನೆ, ಯುನಿಸೆಫ್ ಪ್ರತಿನಿಧಿ, ಬಿಬಿಸಿ ಫಿಲ್ಮಯೂನಿಟ್ ಸಮನ್ವಯಕಾರ, ಚೈನಾದ ಆರೋಗ್ಯ ಸಚಿವರ ಭೇಟಿ,- ರಾಜ್ಯ ಸಮನ್ವಯಕಾರ,ಉಪ ನಿರ್ದೇಶಕ ಪ್ರಕಟಣೆಗಳು ಭಾರತ ಜನಸಂಖ್ಯಾ ಯೋಜನೆ 18 ಮೇ 1988 ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುವರು.
“ಇಷ್ಟೆಲ್ಲಾ ಸಂಪರ್ಕ ಸಾಧನೆಗಳಲ್ಲಿ ಕ್ರಾಂತಿಯಾಗಿದ್ದರು ಅನುಭವ ಆಲೋಚನೆ ವಿಚಾರ ವಿಷಯಗಳ ಸಂವಹನ ಮತ್ತು ಹಸ್ತಾಂತರಕ್ಕೆ ಅತ್ಯಂತ ಅಗ್ಗದ ಮತ್ತು ಕ್ಷಿಪ್ರವಾಹಕಗಳೆಂದರೆ ಇಂದಿಗೂ ಪುಸ್ತಕಗಳೇ”… ಎಂದು ಹೇಳುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿರವರ ಮಾತು ಎಂದೆಂದಿಗೂ ಸತ್ವ ಮತ್ತು ಸತ್ಯವಾಗಿದೆ. ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆ ನಮ್ಮ ವರ್ತನೆ ನಮ್ಮ ವ್ಯಕ್ತಿತ್ವ ನಮ್ಮ ಪದಗಳಿಗೆ ಅರ್ಥ ಕೊಡುತ್ತೆ,
ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗೋದಿಲ್ಲ. ಭಾವನೆಗಳು ಆಲೋಚನೆಗಳು ಇಲ್ಲದೆ ಮನುಷ್ಯನ ಮನಸ್ಸಿಗೆ ಅಸ್ತಿತ್ವವೇ ಇರುವುದಿಲ್ಲ. ಹಾಗಾಗಿ ಭಿನ್ನವಾಗಿ ಬರಿಬೇಕಾದರೆ ಭಿನ್ನವಾಗಿ ಬದುಕಬೇಕು ಅದನ್ನು ಅಕ್ಷರಸಃ ಕಾರ್ಯರೂಪಕ್ಕೆ ತಂದವರು ಗೊರುಚರವರು.
ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಕಚೇರಿಯಲ್ಲಿ ಜಾನಪದ ವಿಭಾಗದಲ್ಲಿ ಸಂಚಾಲಕರಾಗಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕರಾಗಿ, ಗೌರವ ಕಾರ್ಯದರ್ಶಿಯಾಗಿ, ಮೂರು ಸಮ್ಮೇಳನಗಳ ನಿರ್ವಹಣೆ ಮಾಡುತ್ತ ಪ್ರಥಮ ಬಾರಿಗೆ ಬಂಡಾಯ ಸಾಹಿತ್ಯ ಸಮಾವೇಶಕ್ಕೆ ಮುನ್ನುಡಿ ಬರೆದರು.
1992 ರಿಂದ 1995 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆವಹಿಸಿಕೊಂಡು ಕನ್ನಡ ಉಳಿಯುವುದುಗೋಸ್ಕರವಾಗಿ ಸಂಕಲ್ಪ ಮಾಡಿದರು. ಕನ್ನಡ ಕಾಯಕದ ಕೈವಲ್ಯ ಆರಂಭಿಸಿಯೇ ಬಿಟ್ಟರು, ಪರಿಷತ್ತಿನ ಧ್ವಜ ರಚನೆ “ಒಬ್ಬ ಕನ್ನಡಿಗ- ಒಂದು ರೂಪಾಯಿ” ಅಮೃತ ನಿಧಿ ಸಂಗ್ರಹ ಯೋಜನೆ.
ನಾಡಗೀತೆಗಳ ಧ್ವನಿ ಸುರುಳಿ ನಿರ್ಮಾಣ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಕೇರಳಗಳಲ್ಲಿ, ಸಾಹಿತ್ಯ ವಿನಿಮಯ ಸಂಕಿರಣಗಳಿಗೆ ಚಾಲನೆ ನೀಡಿದರು ಮತ್ತು ಯಶಸ್ವಿಯಾದರು.ಪತ್ರಿಕಾ ಕ್ಷೇತ್ರದಲ್ಲಿ ಗೊ.ರು.ಚರವರ ಸಂಪಾದಕತ್ವದಲ್ಲಿ ವಿಕಾಸವಾಣಿ, ಪಂಚಾಯಿತಿ ರಾಜ್ಯ, ಜನಪದ, ಕುಟುಂಬ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಜಾನಪದ ಜಗತ್ತು, ಮಹಾಮನೆ, ಸ್ಕೌಟ್ ಮತ್ತು ಗೈಡ್ಗಳಲ್ಲಿ ತಮ್ಮ ಪರಿಪೂರ್ಣತೆಯ ಜ್ಞಾನದ ಅರಿವಿನ ದೀಪ ಹಚ್ಚಿದ್ದಾರೆ.
ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ ಪ್ರಮುಖ ಕೃತಿಗಳೆಂದರೆ, ಅಮೆರಿಕದಲ್ಲಿ ಆಧುನಿಕ ಹೈನುಗಾರಿಕೆ, ಚೆಗೆವಾರ, ಮನ ಬಯಸಿದ ಮರಣ, ಕನ್ನಡ ಶಾಸ್ತ್ರೀಯ ಭಾಷಾ ವರದಿ, ಭಾರತದಲ್ಲಿ ಸಮುದಾಯ ಅಭಿವೃದ್ಧಿ ವಿಕಾಸ ಮತ್ತು ಇನ್ನೂ ಹಲವಾರು ಹಾಗೂ ಸ್ವರಚಿತ ಮಾಡಿರುವುವುಗಳೆಂದರೆ ಕಂತೆ ಭಿಕ್ಷ, ಅನುಭಾವ, ಚಿತ್ರಜಂಗಮ, ಗೊಂಡೇದಹಳ್ಳಿಯಿಂದ ಬೆಂಗಳೂರಿಗೆ, ಸಾಕ್ಷಿಕಲ್ಲು, ಬೆಳ್ಳಕ್ಕಿ ಹಿಂಡು ಬೆದದ್ಯಾವು, ಶರಣಾರ್ಥಿ, ಆಲೋಚನೆ, ನೇತ್ರದಾನಿ ಮೋದಿ, ಮುಂತಾದವುಗಳು.
ಸಮರ್ಥಶಾಲಿಗಿಂತ ಮಹಾನ್ ವ್ಯಕ್ತಿ ತುಂಬ ಭಿನ್ನವಾಗಿರುತ್ತಾನೆ ಮಹಾನ್ವ್ಯಕ್ತಿ ಸಮಾಜದ ಸೇವಕನಾಗುವುದಕ್ಕೆ ಸದಾಬದ್ಧತೆಯಿಂದ ಸಿದ್ಧನಾಗಿರುತ್ತಾನೆ. ನಿಧಿ, ನಿಯತ್ತು, ನಿರ್ವಹಣೆ, ಈ ಮೂರು ತತ್ವಗಳು ಗೊರುಚರವರು ಬೆಳೆದು ಇತರರನ್ನು ಬೆಳೆಸಲು ಮೈಲಿಗಲ್ಲುಗಳಾದವು.ಚಲನಚಿತ್ರ ಸಾಹಿತ್ಯ ಮತ್ತು ನಿರ್ದೇಶನ ಮಾಡಿದವುಗಳೆಂದರೆ ಕರ್ನಾಟಕ ಜನಪದ ಕಲೆಗಳು, ಭೂ ಸೇನೆ, ಸಾಕು ಮಾಡೋ ಶಿವನೇ, ಚಿನ್ನಾರಿ ಇತ್ಯಾದಿ 50ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳಲ್ಲೂ ‘ಸೈ’ ಎನಿಸಿಕೊಂಡ ಕೀರ್ತಿ ಕಳಸವಾಗಿದ್ದಾರೆ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ 1995 ರಿಂದ 2016 ರವರೆಗೆ ಅಧ್ಯಕ್ಷರಾಗಿದ್ದು. ರಾಷ್ಟ್ರಮಟ್ಟದ 12 ಶರಣ ಸಾಹಿತ್ಯ ಸಮ್ಮೇಳನ, ರಾಜ್ಯ ಮಟ್ಟದ ನಾಲ್ಕು ಮಹಿಳಾ ಸಮಾವೇಶಗಳು, 12ನೇ ಶತಮಾನದ ಶರಣ ಕ್ಷೇತ್ರಗಳ ದಾಖಲೀಕರಣ ಹಾಗೂ 600ಕ್ಕೂ ಹೆಚ್ಚು ದತ್ತಿಗಳ ಸಂಗ್ರಹ ಮಾಡಿರುತ್ತಾರೆ.
ಜಾನಪದ ಸಂಪಾದಿತ ಕೃತಿಗಳು ಕನ್ನಡ -ಕನ್ನಡಿಗ- ಕರ್ನಾಟಕ,ದೇಶಮುದ್ರೆ , ಹೊನ್ನ ಬಿತ್ತೇವು ಹೊಲಕೆಲ್ಲ, ಸಂಪ್ರೋಕ್ಷಣ, ಮೂಗುತಿ, ಸಾರ್ಥಕ ಜೊತೆಗೆ 35ಕ್ಕೂ ಹೆಚ್ಚು ಸ್ಮರಣ ಸಂಚಿಕೆಗಳು. ಸಾರ್ವಜನಿಕ ಸಂಸ್ಥೆಗಳಲ್ಲಿ ಅಧ್ಯಕ್ಷ, ಕಾರ್ಯದರ್ಶಿ, ಸಂಘಟಕ, ಯೋಜನಾಧಿಕಾರಿ ಸದಸ್ಯರಾಗಿ ಪದ ನಿಮಿತ್ತ ಸದಸ್ಯತ್ವ ಪಡೆದಿದ್ದಾರೆ.
ಚಿಕ್ಕಮಗಳೂರು, ದಾಂಡೇಲಿ, ಕಠ್ಮಂಡು, ನೇಪಾಳ, ಮುಂಬೈ, ದುಬೈ, ಬೆಂಗಳೂರುಗಳಲ್ಲಿ ಕನ್ನಡ, ಜಾನಪದ, ಸಂಸ್ಕೃತಿ, ಅನುಭಾವ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಾಡಿನ ಹಿರಿಮೆ ಗರಿಮೆ ಹೆಚ್ಚಿಸಿದ್ದಾರೆ. “ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ” ಎಂದು ಸಾಧನೆಯ ಉತ್ತುಂಗಕ್ಕೆ ಏರಿದವರು.87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು, ಮಂಡ್ಯ 20 ರಿಂದ 22 ಡಿಸೆಂಬರ್ 2024ರಂದು ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪರವರ ಕನ್ನಡ ಸಾಹಿತ್ಯದ ತೇರಿನ ರಥ ಮೆರವಣಿಗೆಯಲ್ಲಿ ಕನ್ನಡ ಧ್ವಜ ಹಿಡಿದು ನಡೆಯೋಣ ಎಲ್ಲರೂ ಬನ್ನಿ…. ಕನ್ನಡಕ್ಕಾಗಿ ಕೈ ಎತ್ತಿ ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ.