ದುನಿಯಾ ವಿಜಯ್ ನಟಿಸುತ್ತಿರುವ ಚಿತ್ರ “ಲ್ಯಾಂಡ್ ಲಾರ್ಡ್”. ಚಿತ್ರದ ಚಿತ್ರೀಕರಣ ನೆಲಮಂಗಲದ ಬಳಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ.ಇದೇ ಸಂದರ್ಭದಲ್ಲಿ ದುನಿಯಾ ವಿಜಯ್ ಹುಟ್ಟುಹಬ್ಬ ಆಚರಣೆ ಹಾಗೂ ಪತ್ರಿಕಾಗೋಷ್ಠಿಯನ್ನು ಚಿತ್ರತಂಡ ಆಯೋಜಿಸಿತ್ತು. ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಚಿತ್ರತಂಡದ ಸದಸ್ಯರು, ” ಲ್ಯಾಂಡ್ ಲಾರ್ಡ್” ಚಿತ್ರದ ಕುರಿತು ಮಾತನಾಡಿದರು.
ಇದೊಂದು ಗ್ರಾಮೀಣ ಸೊಗಡಿನ ಕಥೆ. 1980 ರ ಕಾಲಘಟ್ಟದಲ್ಲಿ ನಡೆಯುವ ಕಥೆಯೂ ಹೌದು. ನಮ್ಮ ಚಿತ್ರಕ್ಕೆ “ಲ್ಯಾಂಡ್ ಲಾರ್ಡ್” ಅಂತ ಹೆಸರಿಡಲಾಗಿದ್ದು, ”ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ” ಎಂಬ ಅಡಿಬರಹಇದೆ.ನಿರ್ಮಾಪಕರು ಕೆ.ವಿ.ಸತ್ಯಪ್ರಕಾಶ್.ಈ ಕಥೆಗೆ ವಿಜಯ್ ಸೂಕ್ತ ನಾಯಕ. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ವಿಜಯ್ ಅವರ ಪುತ್ರಿ ರಿತನ್ಯ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಚಾಮಿ ಗೌಡ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನವಿದೆ. ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಬರೆದಿದ್ದಾರೆ ಎಂದು ನಿರ್ದೇಶಕ ಜಡೇಶ್ ಕೆ ಹಂಪಿ ತಿಳಿಸಿದರು.
ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಮಾತನಾಡಿದ ನಾಯಕ ವಿಜಯ್ ಕುಮಾರ್, ಜಡೇಶ್ ಒಂದೊಳ್ಳೆ ಗ್ರಾಮೀಣಾ ಸೊಗಡಿನ ಕಥೆ ಮಾಡಿಕೊಂಡಿದ್ದಾರೆ. ನನ್ನ ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ವಿದ್ಯುತ್ ದೀಪಗಳು ಹೆಚ್ಚು ಇರಲಿಲ್ಲ. ಬುಡ್ಡಿ ದೀಪಗಳೇ ಹೆಚ್ಚು.ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಗೆಟಪ್ ನಲ್ಲಿ ನಮ್ಮ ಹಳ್ಳಿಯ ಹಿರಿಯರು ಇರುತ್ತಿದ್ದರು. ಅಲ್ಲಿ ಜಾತಿ, ಮತ ಎಂಬ ಭೇದಭಾವ ಇರಲಿಲ್ಲ. ಇದ್ದದ್ದು ಎರಡೇ. ಒಂದು ಬಡವ. ಮತ್ತೊಂದು ಶ್ರೀಮಂತ. ಈ ಚಿತ್ರದಲ್ಲಿ ನಾನು ಬಡವರ ಪ್ರತಿನಿಧಿಯಾಗಿ ಅಭಿನಯಿಸುತ್ತಿದ್ದೇನೆ. ಸತ್ಯಪ್ರಕಾಶ್ ಹಾಗೂ ಸೂರಜ್ ಗೌಡ ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿದ್ದಾರೆ. ಉತ್ತಮ ಚಿತ್ರತಂಡದ ಜೊತೆಗೆ ಕೆಲಸ ಮಾಡುತ್ತಿರುವ ಖುಷಿ ಇದೆ ಎಂದರು.ಜಡೇಶ್ ಅವರ ಕಥೆ ಇಷ್ಟವಾಯಿತು. ಕೆಲವೇ ದಿನಗಳಲ್ಲಿ ಈ ಚಿತ್ರ ಆರಂಭವಾಯಿತು. ನಿರ್ಮಾಣದಲ್ಲಿ ನನ್ನ ಜೊತೆಗೆ ಮಗ ಸೂರಜ್ ಗೌಡ ಇದ್ದಾನೆ.