ಚಿಕ್ಕಮಗಳೂರು: ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನಲ್ಲಿ ದತ್ತಮಾಲಾ ಧರ್ಮ ಸಭೆಯಲ್ಲಿ ವಕ್ಫ್ ವಿರುದ್ಧ ಮಾತನಾಡಿದ ಅವರು, ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ. ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ.
ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನ ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನ ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ಹರಿಹಾಯ್ದರು.