ಬೆಂಗಳೂರು: ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶಾಸಕ ಮುನಿರತ್ನ ಪಾಲ್ಗೊಂಡಿದ್ದಾರೆ.ಇಂದು ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿರುವ ಶಾಸಕ ಸಿ.ಕೆ.ರಾಮಮೂರ್ತಿ, ನಮ್ಮ ಭೂಮಿ, ನಮ್ಮ ಹಕ್ಕು ಹೋರಾಟ ಇಂದು ಮಾಡುತ್ತಿದ್ದೇವೆ. ನೂರಾರು
ವರ್ಷಗಳ ಕಾಲದ ದೇವಾಲಯ ಗಳು ಇಂದು ವಕ್ಫ್ ಆಸ್ತಿ ಅಂತಾರೆ. ಮೆಜೆಸ್ಟಿಕ್, ಮಾರ್ಕೆಟ್, ಲಾಲ್ಬಾಗ್, ಕಬ್ಬನ್ಪಾರ್ಕ್ ನಮ್ಮದು ಅಂತಾಯಿದ್ದಾರೆ. ನಾವು ರೈತರ ಜೊತೆಗೆ ಇದ್ದೇವೆ. ನಮ್ಮ ಎಲ್ಲಾ ಸಮಾಜವನ್ನು ಒಡೆದು ಮುಗಿಸಿದರು. ಕಾಂಗ್ರೆಸ್ ಸರ್ಕಾರ ಹಿಂದು, ಮುಸ್ಲಿಂ ಹಾಗೂ ಕ್ರಿಸ್ಚಿಯನ್ರನ್ನು ಒಡೆದು ಅಧಿಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುನಿರತ್ನ, ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ. ಈ ಸರ್ಕಾರ ಗವಿಗಂಗಾಧರೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ ಸೇರಿದಂತೆ ಹಲವು ದೇವಾಲಯಗಳ ಪ್ಲಾನ್ ರೆಡಿ ಮಾಡಲಾಗುತ್ತಿದೆ. ಈ ಸರ್ಕಾರ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರಕ್ಕೆ ಅನುದಾನ ಕೊಡುವುದಿಲ್ಲ. ರಾಜ್ಯದ ಜನ ಈಗಲೇ ಎಚ್ಚೆತ್ತುಕೊಳ್ಳಿ. ಪಹಣಿ ಆಗಾಗ ಬದಲಾವಣೆ ಅಗುತ್ತದೆ. ಎಚ್ಚೆತ್ತುಕೊಂಡು ಪಹಣಿ ಆಗಾಗ್ಗೆ ಚೆಕ್ ಮಾಡಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
ಪಕ್ಷದ ಹಿರಿಯ ಮುಖಂಡ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಈ ಹೋರಾಟ ಸಂವಿಧಾನ ಉಳಿಸಲು ಹೋರಾಟ. ಸಂವಿಧಾನದ ದೃಷ್ಟಿಯಲ್ಲಿ ಒಬ್ಬ ಹೆಚ್ಚು, ಒಬ್ಬ ಕಡಿಮೆ ಇರಬಾರದು ಎಂಬ ಹೋರಾಟ. 1995 ರಲ್ಲಿ ವಕ್ಫ್ ಗೆ ಒಂದು ಕಾನೂನು ಮಾಡುತ್ತಾರೆ. ವಕ್ಫ್ ಮಂಡಳಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಭೂಮಿ ನಮ್ಮದು ಎಂದರೆ ಅದನ್ನು ನಾವು ಬಿಟ್ಟು ಕೊಡಬೇಕು. ಅದನ್ನು ಪ್ರಶ್ನಿಸುವ ಅಧಿಕಾರವೇ ಇಲ್ಲ.
ಇದು ಸಂವಿಧಾನ ವಿರೋಧಿ ಅಲ್ವಾ? ಇದು ಹೇಗಿದೆ ಅಂದರೆ, ತೋಳ ಕುರಿಮರಿಯನ್ನು ಎತ್ತುಕೊಂಡು ಹೋದ್ರೆ, ಕುರಿಮರಿ ನ್ಯಾಯ ಕೇಳುವುದು ಯಾರ ಬಳಿ? ಸಿದ್ಧರಾಮಯ್ಯನವರೇ ನೀವು ವಕೀಲರು. ಈ ಕೆಲಸ ಮಾಡಲು ನೀವು ವಕೀಲ ಓದಬೇಕಾಗಿತ್ತಾ? ಜನ ಅಧಿಕಾರ ಎಂಬ ವರವನ್ನು ಕಾಂಗ್ರೆಸ್ಗೆ ಕೊಟ್ಟಿದ್ದಾರೆ. ಈಗ ಭಕಾಸುರ ವಕ್ಫ್ ಬೋರ್ಡ್ ಆಗಿದೆ. ಸಂವಿಧಾನಕ್ಕೆ ಬೆದರಿಕೆ ಹಾಕುತ್ತಿರುವವರನ್ನು ಉಳಿಸಬೇಕಾ? ಎಂದು ಗುಡುಗಿದ್ದಾರೆ.