ಹುಬ್ಬಳ್ಳಿ: ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ, ರಾಜ್ಯ ಸರ್ಕಾರದ ಸೂಚನೆಯ ಮೇರೆಗೇ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂಬುದಾಗಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಆರೋಪಿಸಿದರು. ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬAಧಿಸಿದ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಹುಬ್ಬಳ್ಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಪಾಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರು ಹಾಗೂ ವಿವಿಧ ಸಂಘಟನೆಗಳಿAದ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ ತಾಣಗಳ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ೧೦-೧೫ ರೈತರ ನಿಯೋಗ ಮನವಿ ಸಲ್ಲಿಸುವ ನಿರೀಕ್ಷೆ ಇತ್ತು. ಆದರೆ, ೭೦ಕ್ಕೂ ಹೆಚ್ಚು ಅಹವಾಲು ಬಂದಿದೆ ಎಂದರು.
ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಇದೆಲ್ಲ ಆಗಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಸೂಚನೆಯಂತೆ ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಈಗ ರೈತರಿಗೆ ಕೊಟ್ಟ ನೋಟಿಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಕೈವಾಡ ಇಲ್ಲದೆ ಆಸ್ತಿ ಕಬಳಿಸಲು ಸಾಧ್ಯವಿಲ್ಲ. ಸರ್ಕಾರದ ಸೂಚನೆ ಇಲ್ಲದೆ ಅಧಿಕಾರಿಗಳು ಹೇಗೆ ಕೆಲಸ ಮಾಡ್ತಾರೆ ಇದು ಅತ್ಯಂತ ಗಂಭೀರವಾದ ವಿಚಾರ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ವರದಿ ತಯಾರಿಸುತ್ತೇವೆ ಎಂದೂ ಜಗದಾಂಬಿಕಾ ಪಾಲ್ ಹೇಳಿದರು.
ಮತ್ತೊಂದೆಡೆ, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ರೈತರ ಆಸ್ತಿ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದಿಸಲು ಸುತ್ತೋಲೆ ಹೊರಡಿಸಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಮಧ್ಯೆ, ಜಗದಾಂಬಿಕಾ ಪಾಲ್ ನೇರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.