ಬೆಂಗಳೂರು: ವಕ್ಫ್ ಭೂಮಿ ವಿವಾದ ಹಾಗೂ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುದೀರ್ಘ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರಿಗೆ ನೀಡಲಾಗಿರುವ ನೋಟಿಸ್ ಗಳನ್ನು ತಕ್ಷಣ ವಾಪಸ್ ಪಡೆಯಲು ನಮ್ಮ ಸರ್ಕಾರ ಸೂಚನೆ ನೀಡಿದ ನಂತರವೂ ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿರುವುದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆಯೇ ಹೊರತು ಇದರಲ್ಲಿ ರೈತರ ಹಿತಾಸಕ್ತಿ ರಕ್ಷಣೆಯ ಯಾವ ಸದುದ್ದೇಶ ಇಲ್ಲ. ಇದನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ವಕ್ಫ್ ವಿಚಾರದಲ್ಲಿ ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್ಗಳನ್ನು ತಕ್ಷಣ ವಾಪಸ್ ಪಡೆಯಬೇಕು. ಕಾನೂನು ಬಾಹಿರವಾಗಿ ಹಾಗೂ ನೋಟೀಸ್ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು. ಅಧಿಕಾರಿಗಳು ಎಚ್ಚರ ವಹಿಸಿ ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ. ಈ ಸೂಚನೆಯ ನಂತರವೂ ಬಿಜೆಪಿ ನಾಯಕರು ಯಾವ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.