ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ವಕ್ಫ್ ಆಸ್ತಿ ವಿಚಾರದ ಬಗ್ಗೆ ಈಗಾಗಲೇ ರಾಜ್ಯದ ಹಲವೆಡೆ ಹೋರಾಟ ನಡೆಯುತ್ತಿದ್ದು, ಈ ಹೋರಾಟಕ್ಕೆ ಜನರ ಜೊತೆಗೆ ನಿಂತ ರಾಜ್ಯ ಬಿಜೆಪಿ ಘಟಕ ಮೂರು ತಂಡಗಳನ್ನು ಮಾಡಿಕೊಂಡು ರಾಜ್ಯ ಪ್ರವಾಸಕ್ಕೆ ಸಿದ್ಧವಾಗಿದೆ.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸಕ್ಕೆ ಮುಂದಾದ ಬಿಜೆಪಿ ಡಿಸೆಂಬರ್ ಮೊದಲ ವಾರದಲ್ಲಿ ಪ್ರವಾಸ ನಡೆಸಲಿದೆ.
ಇದರ ಮಧ್ಯೆ, ಹೈಕಮಾಂಡ್ ನಾಯಕರ ಭೇಟಿಗೂ ವಿಜಯೇಂದ್ರ ಸಿದ್ಧತೆ ನಡೆಸಿದ್ದಾರೆ. ವಾರಾಂತ್ಯಕ್ಕೆ ದೆಹಲಿಗೆ ತೆರಳಿ, ರಾಜ್ಯದಲ್ಲಿನ ವಕ್ಫ್ ವಿಚಾರ ಹೈಕಮಾಂಡ್ ನಾಯಕರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ವಕ್ಫ್ ವಿಚಾರದಲ್ಲಿನ ಹೋರಾಟದ ಇಂಚಿಂಚೂ ಮಾಹಿತಿಯನ್ನು ಹೈಕಮಾಂಡ್ ನಾಯಕರ ಮುಂದೆ ತಿಳಿಸಲು ನಿರ್ಧರಿಸಿರುವ ಬಿ.ವೈ.ವಿಜಯೇಂದ್ರ ಬಳಿಕ ಹೈಕಮಾಂಡ್ ನಾಯಕರ ಸೂಚನೆಯನ್ನು ಪಡೆದು ರಾಜ್ಯಾದ್ಯಂತ ಹೋರಾಟ ಆರಂಭಿಸಲಿದ್ದಾರೆ.