ಬೆಳಗಾವಿ: ಆಡಳಿತಾರೂಢ ಕಾಂಗ್ರೆಸ್ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅಳವಡಿಸಿಕೊಂಡು ಹಿಂದೂ-ಮುಸ್ಲಿಂರ ನಡುವೆ ಬಿರುಕು ಮೂಡಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.
ಹಿಂದೂಗಳ ಆಸ್ತಿಯನ್ನು ಕಾಂಗ್ರೆಸ್ ಒಡೆಯುತ್ತಿದೆ. ಸಮಾಜದಲ್ಲಿ ಕಾಂಗ್ರೆಸ್ ವಕ್ಫ್ ಮೂಲಕ ಸಾಮರಸ್ಯ ಕೆಡಿಸುತ್ತಿದೆ. ವಕ್ಫ್ ನೋಟಿಸ್, ಪಹಣಿ ಗೊಂದಲ ನಿವಾರಣೆ ಮಾಡಬೇಕು. ಆಯಾಯ ರೈತರ ಹೆಸರಿಗೆ ಮತ್ತೆ ಪಹಣಿ ಬದಲಾವಣೆ ಆಗಬೇಕು. 1974 ರ ವಕ್ಫ್ ಗೆಜೆಟ್ ಅಧಿಸೂಚನೆ ವಾಪಾಸು ಪಡೆಯಬೇಕು. ಕೇಂದ್ರದ ವಕ್ಫ್ ತಿದ್ದುಪಡಿ ನಿಯಮಾವಳಿಗಳನ್ನು ನಮ್ಮ ರಾಜ್ಯ ಸರಳ ಬಹುಮತದಲ್ಲಿ ಪಾಸ್ ಮಾಡಬೇಕು” ಎಂದು ಒತ್ತಾಯಿಸಿದರು. “ವಕ್ಫ್ ಬೋರ್ಡ್ ಮೂಲಕ ಕಾಂಗ್ರೆಸ್ ಸರ್ಕಾರವು ಹಿಂದೂಗಳ ಭೂಮಿ, ದೇವಸ್ಥಾನಗಳು ಮತ್ತು ಸ್ಮಶಾನ ಭೂಮಿಯನ್ನು ಕಬಳಿಸುತ್ತಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದ್ದು, ಹಿಂದೂ-ಮುಸಲ್ಮಾನರ ನಡುವೆ ಕೋಮು ಸೌಹಾರ್ದತೆ ಸೃಷ್ಟಿಸುತ್ತಿದೆ. ರೈತರ ಪಹಣಿಗಳಲ್ಲಿ ವಕ್ಫ್ ಎಂಬ ಉಲ್ಲೇಖವನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
ಐತಿಹಾಸಿಕ ದೇವಾಲಯಗಳು, ಗೋಮಾಳಗಳು, ಶಾಲೆಗಳು ಮತ್ತು ಸಮಾಧಿ ಸ್ಥಳಗಳು ವಕ್ಫ್ ಆಸ್ತಿಯಾಗುತ್ತಿವೆ. ರಾತ್ರೋರಾತ್ರಿ ಪಹಣಿಗಳು ಬದಲಾಗುತ್ತಿವೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮುನೇಶ್ವರ ನಗರವನ್ನು ಉದಾಹರಣೆಯಾಗಿ ನೀಡಿದ ಅವರು, ಅಲ್ಲಿಕುರುಬ ಸಮುದಾಯದ 110 ಕುಟುಂಬಗಳಿವೆ. 60 ವರ್ಷಗಳ ಹಿಂದೆ ಆಗಿನ ಕಾಂಗ್ರೆಸ್ ಸರ್ಕಾರದಿಂದ ಭೂ ದಾಖಲೆಗಳನ್ನು ಪಡೆದಿದ್ದರು ಇಂದು ಅದು ಇದ್ದಕ್ಕಿದ್ದಂತೆ ವಕ್ಫ್ ಭೂಮಿಯಾಗಿ ಮಾರ್ಪಟ್ಟಿದೆ. ವಕ್ಫ್ನಿಂದ ರೈತರಿಗೆ ನೋಟಿಸ್ ವಿಚಾರವಾಗಿ ಸದನದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಡುವೆ ವಾಕ್ಸಮರ ನಡೆಯಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, “ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿರೋದು ತಪ್ಪಿಲ್ಲ ಅಂದರೆ ನಾನು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ನಿಲ್ಲುತ್ತೇನೆ. ಬೇಕಿದ್ರೆ ಸ್ಪೀಕರ್ ನನಗೆ ಛೀಮಾರಿ ಹಾಕಲಿ” ಎಂದು ಸವಾಲು ಹಾಕಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿ ಸವಾಲು ಹಾಕಿದರು. “101 ನೋಟಿಸ್ ಕೊಟ್ಟಿದ್ದಾರೆ ಅಂದ್ರಲ್ಲ, ಅದಕ್ಕೆ ದಾಖಲೆ ಕೊಡಿ. ಇವಾಗ್ಲೇ ನಾನು ನನ್ನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ” ಎಂದು ಜಮೀರ್ ಅಹ್ಮದ್ ಹೇಳಿದರು.
ಲವ್ ಜಿಹಾದ್ ಆಯ್ತು, ಇದೀಗ ಲ್ಯಾಂಡ್ ಜಿಹಾದ್ ನಡೆಯುತ್ತಿದೆ. ವಕ್ಫ್ ಹಗರಣದಿಂದ ಜನರು ಭಯಭೀತರಾಗಿದ್ದಾರೆ. ವಕ್ಫ್ ಬೋರ್ಡ್ ಅವಾಂತರದಿಂದ ಗೋಮಾಳ, ಸ್ಮಶಾನ, ಪಿತ್ರಾರ್ಜಿತ ಆಸ್ತಿ ಪಹಣಿ ಬದಲಾವಣೆ ಆಗಿದೆ. ಕಂಡ ಕಂಡ ಆಸ್ತಿಯೆಲ್ಲಾ ನಮ್ಮದೆಂದು ಹೇಳಲಾಗುತ್ತಿದೆ. ಪಹಣಿ ರಾತ್ರೋ ರಾತ್ರಿ ಬದಲಾವಣೆ ಆಗ್ತಿದೆ. ರೈತಾಪಿ ವರ್ಗ ಆತಂಕದಲ್ಲಿದೆ. ಜಮೀನೇ ಇಲ್ಲ ಅಂದರೆ ಏನು ಮಾಡಬೇಕು? ಯಾಕಾಗಿ ಈ ಸರ್ಕಾರ ಬಂತೋ ಎಂದು ಜನ ಭಾವಿಸುತ್ತಿದ್ದಾರೆ. ವಕ್ಫ್ ಆಸ್ತಿ ಅತಿಕ್ರಮಣ ಆಗಿದೆ ಎಂದು ಜನರು ಸರ್ಕಾರಿ ಕಚೇರಿ ಮುಂದೆ ಕ್ಯೂ ನಿಂತಿದ್ದಾರೆ” ಎಂದು ಅಶೋಕ್ ಹೇಳಿದರು.
ವಕ್ಫ್ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಡವರು ಮತ್ತು ರೈತರನ್ನು ತೆರವುಗೊಳಿಸುವುದಿಲ್ಲ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಶುಕ್ರವಾರ ಹೇಳಿದ್ದಾರೆ. ಭೂಮಿಯನ್ನು ಅವರಿಗೆ ಹಸ್ತಾಂತರಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ಖಾನ್ ಹೇಳಿದರು.