ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆವತಿಯಿಂದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ, ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಧ್ಯಮ ಹಾಗೂ ಬಾರೀ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಫ.ಗು.ಹಳಕಟ್ಟಿಯವರು ವಚನ ಸಾಹಿತ್ಯ ಕುರಿತು ಕೆಲಸ ಮಾಡದಿದ್ದರೆ ಬಸವಣ್ಣನವರ ಬಗ್ಗೆ ಪರಿಚಯವಾಗುತ್ತಿರಲಿಲ್ಲ, ಸುಮಾರು 250 ವಚನಕಾರರನ್ನು ವಚನ ಸಾಹಿತ್ಯಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ.ಫ.ಗು.ಹಳಕಟ್ಟಿ ವಚನ ಸಾಹಿತ್ಯದ ಗುಮ್ಮಟ ಇದ್ದಂತೆ, ಬಿ ಎಲ್ ಡಿ.ವಿದ್ಯಾಸಂಸ್ಥೆ ಬೆಳೆಯುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ, ವಚನ ಸಾಹಿತ್ಯದ ಮಹತ್ವವನ್ನು ಹೆಚ್ಚಿಸಿದ್ದಾರೆ,
ಸುಮಾರು 10ಸಾವಿರ ವಚನಗಳನ್ನು ಪರಿಚಯಿಸಿದ ಕೀರ್ತಿ ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.ಎಂ.ಎಂ ಕಲಬರ್ಗಿಯವರು ಫ.ಗು.ಹಳಕಟ್ಟಿಯವರ ಸಂಶೋಧನಾ ಕೇಂದ್ರ ಆರಂಭವಾಗಬೇಕು ಎಂಬ ಕನಸನ್ನು ಹೊಂದಿದ್ದರು. ಅದರಂತೆ ನಾವು ಫ.ಗು.ಹಳಕಟ್ಟಿ ಅವರ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ ಸೋಮಶೇಖರ್ ಮಾತನಾಡಿ, ಡಾ.ಫ.ಗು.ಹಳಕಟ್ಟಿ ಯವರು ವಚನ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬಾರೀ ಅಪಾರವಾದದ್ದು, ಅವರನ್ನು ಬಿಜಾಪುರದ ವಚನ ಸಾಹಿತ್ಯದ ಗುಮ್ಮಟ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಚಂದ್ರಶೇಖರ್ ಕಂಭಾರ ಮಾತನಾಡಿ, ಫ.ಗು.ಹಳಕಟ್ಟಿ ಯವರು ಸಂಗ್ರಹಿಸಿದ ವಚನ ಸಾಹಿತ್ಯ ಹೆಚ್ಚು ಪ್ರಮಾಣದಲ್ಲಿ ಅನುವಾದವಾಗಬೇಕು,ವಚನ ಸಾಹಿತ್ಯ 80 ಭಾಷೆಗಳಲ್ಲಿ ಪ್ರಚಾರ ನಡೆದಿದೆ ಇದು ಮಹತ್ವವಾದ ಬೆಳವಣಿಗೆಯಾಗಿದೆ, ವಿದೇಶಿ ಯರು ವಚನ ಸಾಹಿತ್ಯವನ್ನು ಹೆಚ್ಚು ಪ್ರಮಾಣದಲ್ಲಿ ತಿಳಿದುಕೊಳ್ಳಲು ಕಾತುರರಾಗಿದ್ದಾರೆ.
ಈ ಹಿನ್ನಲೆಯಲ್ಲಿ ವಚನ ಸಾಹಿತ್ಯ ಕುರಿತ ಸಮಾರಂಭಗಳು ಹೆಚ್ಚು ಪ್ರಮಾಣದಲ್ಲಿ ನಡೆಯಲಿ ಎಂದು ಹೇಳಿದರು.ಗದಗನ ಡಂಬಳ ಮಠದ ತೋಂಟದಾರ್ಯ ಮಠದ ಡಾ.ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿ ಆಶೀರ್ವಚನ ನೀಡಿ, ವಚನ ಸಾಹಿತ್ಯದ ಮೂಲಕ ಬಸವಾದಿ ಶರಣರ ಬಗ್ಗೆ ತಿಳಿಸದಿದ್ದರೆ ಅವರ ಪರಿಚಯವೇ ಆಗುತ್ತಿರಲಿಲ್ಲ,ಬಿಎಲ್ ಡಿ ಸಂಸ್ಥೆ ಯನ್ನು ಹುಟ್ಟು ಹಾಕಿದವರು, ಮಹಿಳೆಯರ ಶಿಕ್ಷಣಕ್ಕಾಗಿ ಶಾಲೆಗಳನ್ನು ಪ್ರಾರಂಭಿಸಿದವರು, ಬ್ಯಾಂಕಿಂಗ್ ವ್ಯವಸ್ಥೆಯನ್ನು ಹುಟ್ಟುಹಾಕಿದರು,ಬಸವಾದಿ ಶರಣರ ಆಶಯದಂತೆ ತಮ್ಮ ಬದುಕನ್ನು ನಡೆಸಿದವರು.
ಜನರ ಮನೆ, ಮನೆಗಳಲ್ಲಿ ವಚನ ಹಸ್ತಪ್ರತಿಗಳನ್ನು ಸಂಗ್ರಹಿಸಿದ ಮಹಾನ್ ವ್ಯಕ್ತಿ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಮಹಳಾ ಅಧ್ಯಕ್ಷೆ ಪ್ರಮೀಳಾ ಗರಡಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಿ.ಗಾಂಚಿ ಮತ್ತಿತರರು ಭಾಗವಹಿಸಿದ್ದರು.