ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆಯಿಂದಾಗಿ, ನಗರ ಮತ್ತು ವಿಮಾನ ನಿಲ್ದಾಣದ ನಡುವೆ ಬಿಎಂಟಿಸಿ ನಿರ್ವಹಿಸುವ ವಾಯು ವಜ್ರ ಬಸ್ನಲ್ಲಿನ ಪ್ರಯಾಣಿಕರ ಸಂಖ್ಯೆಯಲ್ಲೂ ಕೂಡ ಏರಿಕೆಯಾಗಿದೆ.
ವಾಯುವಜ್ರ ಬಸ್ ಸೇವೆ 2008ರ ಆರಂಭದಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಆದರೆ, ಸೇವೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಒಂದು ತಿಂಗಳಿನಲ್ಲಿ ವಾಯು ವಜ್ರ ಬಸ್ ಬಳಸಿದ ಪ್ರಯಾಣಿಕರ ಸಂಖ್ಯೆ 4 ಲಕ್ಷ ದಾಟಿದೆ.
ಒಟ್ಟು 144 ಬಸ್ಗಳು 17 ಮಾರ್ಗಗಳಲ್ಲಿ ವಿಮಾನ ನಿಲ್ದಾಣಕ್ಕೆ ಎರಡೂ ದಿಕ್ಕುಗಳಲ್ಲಿ ಪ್ರತಿದಿನ 990 ಟ್ರಿಪ್ಗಳಂತೆ ಕಾರ್ಯ ನಿರ್ವಹಿಸುತ್ತಿವೆ.
ಬಿಎಂಟಿಸಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಜಿಟಿ ಪ್ರಭಾಕರ ರೆಡ್ಡಿ ಅವರು ಮಾತನಾಡಿ, ನವೆಂಬರ್ ತಿಂಗಳಿನಲ್ಲಿ 4,07,531 ಪ್ರಯಾಣಿಕರು ವಾಯು ವಜ್ರದ ಸೇವೆಗಳನ್ನು ಬಳಿಸಿದ್ದಾರೆಂದು ಹೇಳಿದ್ದಾರೆ.
4 ಲಕ್ಷದ ಗಡಿ ದಾಟುತ್ತಿರುವುದು ಇದೇ ಮೊದಲು. ದಿನಕ್ಕೆ ಸರಾಸರಿ 13,584 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆದರೆ, ನವೆಂಬರ್ ತಿಂಗಳಿನಲ್ಲಿ 4 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣ ಮಾಡಿದ್ದಾರೆ. ಇದರೊಂದಿಗೆ 11,13,71,983 ರೂ ಆದಾಯ ಬಂದಿದೆ. ಇದೇ ಮೊದಲ ಬಾರಿಗೆ ವಾಯು ವಜ್ರ ಬಸ್ ಗಳಿಂದ ಬಂದ ಆದಾಯ ಒಂದೇ ತಿಂಗಳಲ್ಲಿ 11 ಕೋಟಿ ರೂಪಾಯಿ ದಾಟಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ಹೇಳಲು ಸಾಧ್ಯವಿಲ್ಲ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಥವಾ ನಿರ್ಗಮಿಸುವ ಫ್ಲೈಯರ್ಗಳ ಸಂಖ್ಯೆ ಹೆಚ್ಚಳವಾಗಿದೆ. ಇತರ ಸಾರಿಗೆ ವಿಧಾನಗಳಿಗೆ ಹೋಲಿಸಿದರೆ ನಮ್ಮ ಟಿಕೆಟ್ ಬೆಲೆ, ಪ್ರಯಾಣದ ಸೌಕರ್ಯ ಮತ್ತು ಹೆಚ್ಚುವರಿ ಮಾರ್ಗಗಳು ಮತ್ತು ಬೇಡಿಕೆಯ ಆಧಾರದ ಮೇಲೆ ನಾವು ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.