ನೆಲಮಂಗಲ: ಕರ್ನಾಟಕ ಜಾನಪದ ಅಕಾಡೆಮಿಯು ಹಿರಿಯ ಜಾನಪದ ಕಲಾವಿದರಿಗೆ ಕೊಡಮಾಡುವ ವಾರ್ಷಿಕ ಗೌರವ ಪ್ರಶಸ್ತಿಗೆ ನೆಲಮಂಗಲ ತಾಲ್ಲೂಕಿನ ಚಿಕ್ಕಮಾರನಹಳ್ಳಿಯ ಸಿ.ಹೆಚ್.ಸಿದ್ಧಯ್ಯ ಅವರು ಆಯ್ಕೆಯಾಗಿದ್ದಾರೆ.ಇವರಿಗೆ 2024ನೇ ಸಾಲಿನ ಪ್ರಶಸ್ತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತತ್ವಪದ ಮತ್ತು ಗೀಗೀಪದದ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ನೀಡಲಾಗಿದ್ದು 25ಸಾವಿರ ರೂಪಾಯಿಗಳ ನಗದು, ಸ್ಮರಣಿಕೆ, ಶಾಲು ಹಾರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರಧಾನವು ಇದೇ ಮಾರ್ಚ್ 15ರ ಶನಿವಾರದಂದು ಬೀದರ್ನ ಪೂಜ್ಯಶ್ರೀ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ನಡೆಯಲಿದೆ.
ಕಿರು ಪರಿಚಯ: ನೆಲಮಂಗಲ ತಾಲ್ಲೂಕಿನ ಚಿಕ್ಕಮಾರನಹಳ್ಳಿಯಲ್ಲಿ ಜನಿಸಿದ ಇವರು ವ್ಯಾಸಂಗದಅವಧಿಯಲ್ಲಿಯೇ ಹಾಡುಗಾರಿಕೆಯ ಗೀಳು ಹತ್ತಿಸಿಕೊಂಡು ಹೋದಲ್ಲಿ ಬಂದಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ವೇದಿಕೆ ಬಳಸಿಕೊಂಡವರು. ನೂರಾರು ಭಾವಗೀತೆಗಳು, ಗೀಗೀಪದಗಳು, ಜಾನಪದ ಮತ್ತು ದೇವರನಾಮಗಳನ್ನು ಹಾಡುವ ಮೂಲಕ ನೆಲಮಂಗಲ ತಾಲ್ಲೂಕು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲಾ ಭಾಗಗಳಲ್ಲಿ ತಮ್ಮದೇಯಾದ ಶೈಲಿಯಲ್ಲಿ ಜಾನಪದ ಗೀತೆಗಳನ್ನು ಸಾರ್ವತ್ರಿಕವಾಗಿ ಹಾಡುವ ಮೂಲಕ ಜನಮನ್ನಣೆಗಳಿಸಿದ್ದಾರೆ. ಅಲ್ಲದೇ ಹೊರರಾಜ್ಯಗಳಲ್ಲೂ ಹಾಡುವುದನ್ನು ಮುಂದುವರಿಸಿರುವ ಇವರನ್ನು ಇತ್ತೀಚೆಗೆ ಕನ್ನಡ ಜಾನಪದ ಪರಿಷತ್ ರಾಜ್ಯಾದ್ಯಂತ ಜಾನಪದ ಕಲೆಗಳ ಕ್ಷೇತ್ರಕಾರ್ಯ, ದಾಖಲೀಕರಣ, ತರಭೇತಿಯ ಮೂಲಕ ಜಾನಪದೀಯ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವಂತೆ ನೆಲಮಂಗಲ ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕಗೊಳಿಸಿತ್ತು. ಇದೀಗ ಕರ್ನಾಟಕ ಜಾನಪದ ಅಕಾಡೆಮಿಯು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶುಭ ಹಾರೈಕೆಗಳು: ಜಾನಪದ ಗಾಯಕ ಸಿ.ಹೆಚ್.ಸಿದ್ದಯ್ಯ ಅವರನ್ನು ಪ್ರಶಸ್ತಿಗಾಗಿ ಆಯ್ಕೆಗೊಳಿಸಿರುವುದಕ್ಕೆ ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಮಂಜುಳಾಸಿದ್ದರಾಜು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೂದಿಹಾಲ್ ಕಿಟ್ಟಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎನ್.ಜಿ.ಗೋಪಾಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಬೆಟ್ಟಹಳ್ಳಿ ರುದ್ರೇಶ್, ಕಸಾರ ಅಧ್ಯಕ್ಷ ಡಿ.ಸಿದ್ದರಾಜು ಸೇರಿದಂತೆ ತಾಲ್ಲೂಕಿನ ಹಲವಾರು ಕಲಾವಿದರು, ಜನಪದರು, ಗಾಯಕರುಗಳು ಶುಭಕೋರಿದ್ದಾರೆ.