ಕೋಲಾರ: ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ವಾಲ್ಮೀಕಿ ಭವನದ ಜಾಗದ ಒತ್ತುವರಿ ತೆರವು ವಿಚಾರದ ಸಂಬಂಧವಾಗಿ ಎರಡು ಗುಂಪುಗಳ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದ ಗೊಂದಲ ಉಂಟಾಗಿ ಒಂದು ಗುಂಪು ಸಭೆಯನ್ನು ಬಹಿಷ್ಕರಿಸಿ ನಿರ್ಗಮಿಸಿತು ಮತ್ತೊಂದು ಗುಂಪು ಸಭೆಯಲ್ಲಿ ಭಾಗವಹಿಸಿ 17 ರಂದು ವಾಲ್ಮೀಕಿ ಜಯಂತಿಯನ್ನು ಜಿಲ್ಲಾಡಳಿತದ ಶಿಷ್ಠಾಚಾರದ ಪ್ರಕಾರ ಯಶಸ್ವಿಯಾಗಿ ನೆರವೇರಿಸಲು ತೀರ್ಮಾನಿಸಿತು.
ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿ ಈಗ ನಾವು ಪೂರ್ವಭಾವಿ ಸಭೆ ಕರೆದಿರುವುದು ವಾಲ್ಮೀಕಿ ಜಯಂತಿಯ ಸಿದ್ದತೆ ಬಗ್ಗೆ ಪೂರ್ವ ಸಭೆಯಾಗಿದೆ. ಇದರಲ್ಲಿ ವಾಲ್ಮೀಕಿ ಜಯಂತಿ ಬಗ್ಗೆ ಮಾತ್ರ ಸಲಹೆಗಳನ್ನು ನೀಡಬಹುದು. ಒತ್ತುವರಿ ತೆರುವು ವಿಚಾರವಾಗಿ ವಾಲ್ಮೀಕಿ ಜಯಂತಿ ಮುಗಿದ ನಂತರ ಇನ್ನೊಂದು ದಿನ ಪ್ರತ್ಯೇಕ ಸಭೆ ಕರೆಯೋಣ ಎಂದರು.
ನಗರಸಭೆ ಸದಸ್ಯ ಅಂಬರೀಷ್, ಬಾಲಗೋವಿಂದ, ವೆಂಕಟರಾಮ್, ದಲಿತ ಮುಖಂಡರಾದ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಡಾ.ಚಂದ್ರಶೇಖರ್ ಮುಂತಾದವರು ಜಿಲ್ಲಾಡಳಿತ ಪರವಾಗಿ ಬೆಂಬಲಕ್ಕೆ ನಿಂತು ಸಭೆಯು ಮುಂದುವರೆಯಲು ಸಹಕಾರ ನೀಡಿದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ಅವರು ಸಭೆಯಲ್ಲಿ ವಾಲ್ಮೀಕಿ ಜಯಂತಿಯ ಅಜೆಂಡವನ್ನು ಮಂಡಿಸಿ ಪ್ರತಿವರ್ಷದಂತೆ ಈ ವರ್ಷವು 17ರಂದು ಬೆಳಿಗ್ಗೆ 9 ಗಂಟೆಗೆ ನಗರದ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಸಮರ್ಪಿಸಿ ವಾಲ್ಮಿಕಿ ಭಾವಚಿತ್ರಗಳನ್ನು ಹೊತ್ತ ಪಲ್ಲಕ್ಕಿಗಳ ಮೆರವಣಿಗಳಿಗೆ ಚಾಲನೆ ನೀಡಲಾಗುವುದು.
ಪತ್ರಿ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳಿಂದ ಪಲ್ಲಕ್ಕಿಗಳು ತರಲಾಗುವುದು. ಜಯಂತಿ ಸಂದರ್ಭದಲ್ಲಿ ತಿಂಡಿ, ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳು, ವೇದಿಕೆ ವ್ಯವಸ್ಥೆ, ಅಲಂಕಾರಗಳು, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ಥಬ್ದ ಚಿತ್ರಗಳಿಗೆ ನೆನಪಿನ ಕಾಣಿಕೆ ನೀಡುವುದು ಸಂಬಂಧಿಸಿದಂತೆ ವಿವರಿಸಿದರು.
ನಂತರ ಜಿಲ್ಲಾಧಿಕಾರಿಗಳು ಮಾತನಾಡಿ ನಾನು ಬಂದ ನಂತರ ಇದು ಎರಡನೇ ವಾಲ್ಮೀಕಿ ಜಯಂತಿಯಾಗಿದೆ. ಕಳೆದ ವರ್ಷವು ವಾಲ್ಮೀಕಿ ಭವನದ ಒತ್ತುವರಿ ತೆರವು ಅಗುವವರೆಗೆ ಉದ್ಘಾಟನೆ ಮಾಡಲು ಬಿಡುವುದಿಲ್ಲ ಎಂದು ಹಠಕ್ಕೆ ಬಿದ್ದಾಗ ಸಮಾಧಾನ ಪಡೆಸಿ ಉದ್ಘಾಟನೆ ನೆರವೇರಿಸಲಾಯಿತು ಈಗ ಪ್ರಕರಣ ನ್ಯಾಯಾಲಯದಲ್ಲಿದೆ, ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸೋಣ ಅಗತ್ಯವಾದರೆ ಪ್ರತ್ಯೇಕ ವಕೀಲರನ್ನು ನೇಮಿಸೋಣ,ಕಾರ್ಯಕ್ರಮದಲ್ಲಿ ಯಾರಿಗೂ ಧಕ್ಕೆಯಾಗದಂತೆ ಆಚರಿಸೋಣ. ಯಾರಾದರೂ ಕಾರ್ಯಕ್ರಮಗಳಿಗೆ ಅಡ್ಡಿ ಪಡೆಸಿದರೆ ಎಸ್.ಪಿ. ಅವರು ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದರು.
ನಗರಸಭಾ ಸದಸ್ಯ ಅಂಬರೀಷ್ ಮಾತನಾಡಿ ವಾಲ್ಮೀಕಿ ಜಯಂತಿಗೆ ಪ್ರತಿವರ್ಷ ಅಡ್ಡಿ ಪಡಿಸುವುದು ಕೆಲವರಿಗೆ ಅಭ್ಯಾಸವಾಗಿದೆ.ಅದರೆ ನಾವುಗಳು ಜಿಲ್ಲಾಡಳಿತ ಪರವಾಗಿ ಇರುತ್ತೇವೆ. ಪ್ರತಿ ಪಂಚಾಯಿತಿಯಿಂದಲೂ ಪಲ್ಲಕ್ಕಿಗಳು ಬರಲು ಸೂಚಿಸಲಾಗಿದೆ ಎಂದರು.ಮಾಲೂರಿನ ವೆಂಕಟರಾಮ್ ಮಾತನಾಡಿ ವಾಲ್ಮೀಕಿ ಭವನವನ್ನು ಸರ್ಕಾರವು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುವುದನ್ನು ಸದ್ಬಳಸಿ ಕೊಳ್ಳದೆ ಸಣ್ಣ ಪುಟ್ಟ ಕಾರಣಗಳಿಗೆ ಮುನಿಸಿಕೊಂಡು ಬಳಸಿ ಕೊಳ್ಳದೆ ಇರುವುದು ಸಮಂಜಸವಲ್ಲ ಯಾವ ತಾಲ್ಲೂಕಿನಲ್ಲಿ ಆಚರಿಸುವುದಿಲ್ಲವೋ ಅವರುಗಳು ಜೆಲ್ಲಾ ಕೇಂದ್ರದ ಕಾರ್ಯಕ್ರಮದಲ್ಲಿ ಕೈ ಜೋಡಿಸ ಬೇಕೆಂದು ಮನವಿ ಮಾಡಿದರು, ದಲಿತ ಮುಖಂಡ ವಿಜಯ ಕುಮಾರ್ ಮಾತನಾಡಿ ಯಾವೂದೇ ಕಾರಣಕ್ಕೂ ಸಂಘಟನೆಗಳು ವಿಭಜನೆಯಾಗದಂತೆ ಒಗ್ಗಟ್ಟನ್ನು ಕಾಪಾಡಿ ಕೊಳ್ಳಬೇಕೆಂದು ಸಲಹೆ ನೀಡಿದರು,
ಪಂಡಿತ್ ಮುನಿವೆಂಕಟಪ್ಪ ಮಾತನಾಡಿ ಎಸ್.ಸಿ.ಎಸ್.ಟಿ.ಗಳು ಒಂದಾಗಿ ಜಿಲ್ಲಾಡಳಿತಕ್ಕೆ ಬಲತುಂಬುವ ಕೆಲಸ ಮಾಡಬೇಕು, ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾದಂತೆ ಸಮುದಾಯಕ್ಕೆ ವಂಚನೆಯಾಗಬಾರದು ಎಂದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ನಿಖಿಲ್.ಬಿ. ಅಪರ ಜಿಲ್ಲಾಧಿಕಾರಿ ಮಂಗಳಾ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.