ಬೆಂಗಳೂರು: ಜೈಲಿನಲ್ಲಿ ನಮ್ಮ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜಿ ಸತ್ಯನಾರಾಯಣ ವರ್ಮಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಮೀನು ಅರ್ಜಿಯ ವಿಚಾರಣೆ ವೇಳೆ ವರ್ಮಾ ಅವರು ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ನಾನು ನಿರಪರಾಧಿ. ನಿಜವಾದ ಅಪರಾಧಿಗಳು ನನಗೆ ಜೀವ ಬೆದರಿಕೆಗಳನ್ನೊಡ್ಡಿದ್ದಾರೆ. 2024ರ ಜೂನ್ 28ರಂದು ತಮ್ಮ ದೂರಿನ ಹೊರತಾಗಿಯೂ, ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದದರೂ ಆಡಳಿತಾರೂಢ ಸರ್ಕಾರದ ಪ್ರಭಾವದಿಂದಾಗಿ ನಿಜವಾದ ತಪ್ಪಿತಸ್ಥರ ವಿರುದ್ಧ ತನಿಖೆ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸತ್ಯನಾರಾಯಣ ವರ್ಮಾ ಅವರು ಜೂನ್ 13, 2024 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ವರ್ಮಾ ಸೇರಿದಂತೆ 12 ಆರೋಪಿಗಳ ವಿರುದ್ಧ ಸಿಐಡಿ ಆರಂಭಿಕ ಆರೋಪಪಟ್ಟಿ ಸಲ್ಲಿಸಿದೆ. ಅಲ್ಲದೆ, ಪ್ರಕರಣದ ಪರಿಣಾಮಕಾರಿ ತನಿಖೆಗಾಗಿ ಆರೋಪಿಗಳಿಗೆ ಜಾಮೀನು ನೀಡದಂತೆ ಮನವಿ ಮಾಡಿಕೊಂಡಿದೆ.
ವರ್ಮಾ ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿ ರಬ್ಬರ್ ಸ್ಟ್ಯಾಂಪ್ ಮತ್ತು ಕಾರ್ಪೊರೇಷನ್ ಎಂಡಿ ಮತ್ತು ಅಕೌಂಟ್ಸ್ ಅಧಿಕಾರಿಯ ಸಹಿಗಳನ್ನು ಒಳಗೊಂಡ ಸೀಲುಗಳನ್ನು ಸೃಷ್ಟಿಸಿದ್ದು, ಇತರ ಆರೋಪಿಗಳ ನೆರವಿನೊಂದಿಗೆ ನಕಲಿ ಸಹಿ ಮತ್ತು ದಾಖಲೆಗಳನ್ನು ಸೃಷ್ಟಿಸಿ ಪಾಲಿಕೆಗೆ 89.62 ಕೋಟಿ ರೂ.ಗಳ ಆರ್ಥಿಕ ವಂಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖ ವೇಳೆ ಅವರ ಬಳಿ 8.48 ಕೋಟಿ ನಗದು, 15 ಕೆಜಿ ಚಿನ್ನ, 3.4 ಕೋಟಿ ಮೌಲ್ಯದ ಅಪಾರ್ಟ್ಮೆಂಟ್, 3.31 ಕೋಟಿ ಮೌಲ್ಯದ ಕಾರು, 1.2 ಕೋಟಿ ಮೌಲ್ಯದ ಮತ್ತೊಂದು ಕಾರು ಪತ್ತೆಯಾಗಿದೆ. ಉಳಿದ ಮೊತ್ತವನ್ನು ಮಧ್ಯವರ್ತಿಗಳು ಮತ್ತು ಏಜೆಂಟರು ಸೇರಿದಂತೆ ಇತರ ಆರೋಪಿಗಳಿಗೆ ಹಂಚಿರುವುದು ತಿಳಿದುಬಂದಿದೆ. ಆರೋಪಿಗೆ ಜಾಮೀನು ನೀಡಿದ್ದೇ ಆದರೆ, ಇದೇ ರೀತಿ ಹಲವು ಅಪರಾಧಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಆರೋಪಿಯು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಪರಾರಿಯಾಗುವ ಸಾಧ್ಯತೆಯಿದೆ, ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು. ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆಗಳಿವೆ ಎಂದು ಸಿಐಡಿ ವಾದಿಸಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು. ಆರೋಪಿಗಳಿಗೆ ನಿಜವಾಗಿಯೂ ಜೈಲಿನೊಳಗೆ ಜೀವ ಬೆದರಿಕೆಗಳಿದ್ದರೆ, ರೈಸನ್ ಪ್ರಾಧಿಕಾರವು ಈ ವಿಷಯವನ್ನು ಪರಿಶೀಲಿಸಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಹೇಳಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.