ಕಲಬುರಗಿ: ಮಹಿಂದ್ರಾ ಪಿಕಪ್ ಹಾಗೂ ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ೨೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯ ನಗರದ ಹೊರವಲಯದ ಹಾರುತಿ ಹಡಗಿಲ್ ಬಳಿ ಸಂಭವಿಸಿದೆ.
ರಟಕಲ್ ಗ್ರಾಮ ಕಲಬುರಗಿಯ ಜನತಾ ಲೇಔಟ್ ನಿವಾಸಿ ಮುರಗೇಶ್ ಚಂದ್ರಶೇಖರ ಉಪ್ಪಿನ್ (೪೨) ಹಾಗೂ ಶಹಾಬಾದ್ ನಿವಾಸಿ ಧೂಳಮ್ಮ ಯಮುನಪ್ಪ (೬೦) ಮೃತ ದುರ್ದೈವಿಗಳು.
ಮರುಗೇಶ್ ಕಲಬುರಗಿಯ ಎಚ್ಡಿಎಫ್ಸಿ ಗೋಲ್ಡ್ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಮಂಗಳವಾರ ಮಧ್ಯರಾತ್ರಿ ಕಾರಿನಲ್ಲಿ ಮುರುಗೇಶ್ ಹಾಗೂ ಇನ್ನೋರ್ವ ವ್ಯಕ್ತಿ ಕಲಬುರಗಿ ಕಡೆಗೆ ಹೊರಟಿದ್ದರು. ಈ ವೇಳೆ ಕಲಬುರಗಿ ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಪಿಕಪ್ ಜೀಪಿನಲ್ಲಿದ್ದ ಧೂಳಮ್ಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ ಪಿಕಪ್ ಜೀಪಿನ ಹಿಂಬದಿ ಕುಳಿತಿದ್ದ ೨೫ ಮಂದಿ ಗಾಯಗೊಂಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.