ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಎ೧ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಂಯ್ಯನ ಅವರು ಬುಧವಾರ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ನವೆಂಬರ್ ೬ರಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ೧೦ ಗಂಟೆಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದು, ಮುಡಾ ನಿವೇಶನ ಹಂಚಿಕೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ೪೦ ವರ್ಷದ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಪ್ರಕರಣವೊಂದರ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ.
ಪ್ರಕರಣ ಸಂಬಧ ಲೋಕಾಯುಕ್ತ ಪೊಲೀಸರು ಈಗಾಗಲೇ ಎಲ್ಲಾ ಆರೋಪಿಗಳ ವಿಚಾರಣೆ ಮುಗಿಸಿದ್ದು, ಇಂದು ಸಿದ್ದರಾಮಯ್ಯನವರನ್ನು ವಿಚಾರಣೆ ಒಳಪಡಿಸಿದ್ದಾರೆ.
ಪ್ರಕರಣದಲ್ಲಿ ಎ೨ ಆರೋಪಿ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಎ೩ ಮಲ್ಲಿಕಾರ್ಜುನ ಹಾಗೂ ಎ೪ ದೇವರಾಜು ಸೇರಿ ಹಲವರ ವಿಚಾರಣೆಯನ್ನು ಲೋಕಾಯುಕ್ತ ನಡೆಸಿದೆ.
ಇಂದು ಬೆಳಿಗ್ಗೆ ಬೆಂಗಳೂರಿನಿದ ಖಾಸಗಿ ಕಾರಿನಲ್ಲಿ ಮೈಸೂರಿಗೆ ೯ಗಂಟೆ ಸುಮಾರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಬಂದರು. ಕೆಲಕಾಲ ವಿರಾಮದ ನಂತರ ೧೦ ಗಂಟೆ ವೇಳೆಗೆ ವಿಚಾರಣೆಗಾಗಿ ಲೋಕಾಯುಕ್ತ ಕಚೇರಿಗೆ ತೆರಳಿದರು.
ಕಚೇರಿಯಲ್ಲಿ ಸ್ವಲ್ಪವೇಳೆ ಇದ್ದ ಅವರನ್ನು ಲೋಕಾಯುಕ್ತ ಎಸ್ಪಿ ಉದೇಶ್ ಅವರು ವಿಚಾರಣೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಯಾವುದೇ ಅಂಜಿಕೆ, ಮುಜುಗರವಿಲ್ಲದೆ ವಿಚಾರಣೆ ನಡೆಸಿ ಏನು ಪ್ರಶ್ನೆ ಬೇಕಾದರೂ ಕೇಳಿ ನಾನು ಉತ್ತರಿಸುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ನಾನು ಯಾವುದೇ ತಪ್ಪು ಮಾಡಿಲ್ಲ, ಕಾನೂನು ಬದ್ಧವಾಗಿ ನಡೆದುಕೊಂಡಿದ್ದೇನೆ ಎಂದುತಿಳಿಸಿದ್ದಾರೆ ಎಂದು ತಿಳಿದುಂದಿದೆ.
ಅಧಿಕಾರಿಗಳು ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಪೂರ್ವಸಿದ್ಧತೆ ಮಾಡಿಕೊಂಡಿದ್ದು, ಸುಮಾರು ೭೨ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲು ಸಿದ್ದಪಡಿಸಿಕೊಂಡಿದ್ದರು.