ಬೆಳಗಾವಿ: ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಅವಾಚ್ಯ ಶಬ್ಧದಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿಂದು ವಿಚಾರಣೆ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.ಇಂದು ಬೆಳಿಗ್ಗೆ ಬಂಧಿತ ಸಿ.ಟಿ.ರವಿ ಅವರನ್ನು ಬೆಳಗಾವಿಯ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ರವಿ ಅವರು ಉತ್ತರಿಸಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ನನ್ನ ವಿರುದ್ಧ ಪೊಲೀಸರು ನಡೆದುಕೊಂಡ ರೀತಿ ಗಮನಿಸಿದರೆ ನನಗೆ ಕೊಲೆ ಮಾಡುತ್ತಾರೆ ಎಂಬ ಆತಂಕ ಎದುರಾಗಿದೆ.ನಿನ್ನೆ ವಿಧಾನಸೌಧದಲ್ಲಿ ಸಚಿವೆ ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತದೆ ಎಂದು ಧಮ್ಕಿ ಹಾಕಿದರು ಇದಕ್ಕೆ ಪೂರಕವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ರಾತ್ರಿಯೀಡಿ ಪೊಲೀಸರು ನನ್ನನ್ನು ಮೂರು ಜಿಲ್ಲೆಗಳಲ್ಲಿ ಸುತ್ತಿಸಿದ್ದಾರೆ ಎಂದು ಹೇಳಿದರು. ಸಿ.ಟಿ.ರವಿ ಅವರ ಪರ ವಾದ ಮಂಡಿಸಿದ ವಕೀಲ ಎಂ.ಬಿ. ಜಿರಲಿ ಅವರು ರವಿ ಅವರಿಗೆ ಯಾವ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂಬುದರ ಬಗ್ಗೆ ನ್ಯಾಯಾಲಯದ ಮುಂದೆ ಮನವಿ ಮಾಡಿದರು. ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಹ್ನ 3 ಗಂಟೆಗೆ ಮುಂದೂಡಿ ತೀರ್ಪನ್ನು ಕಾಯ್ದಿರಿಸಿದರು.