ವಿಜಯಪುರ: ಪಟ್ಟಣದ ನಂದಿನಿ ವಿದ್ಯಾನಿಕೇತನ ಶಾಲೆಯ ವತಿಯಿಂದ ಶನಿವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಪುರಸಭೆಯ ಸಹಯೋಗದಲ್ಲಿ ಕನ್ನಡ ಭಾಷೆಯ ಕುರಿತು ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮ ನಡೆಯಿತು. ಪುರಸಭೆ ಆರೋಗ್ಯ ನಿರೀಕ್ಷಕಿ ಲಾವಣ್ಯ ಅವರು ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ವಿದ್ಯಾರ್ಥಿಗಳು, ದಾರ್ಶನಿಕರು,ಸಂತರು, ಕವಿಗಳು, ಶರಣರ ವೇಷಧಾರಿಗಳಾಗಿ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡ ಉಳಿಸಿ, ಕನ್ನಡ ಬೆಳೆಸಿ, ಕನ್ನಡ ನಮ್ಮ ಉಸಿರಾಗಲಿ, ಕನ್ನಡ ನಾಡು ಹಸಿರಾಗಲಿ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರುವ ಎಂಬ ವಾಕ್ಯಗಳುಳ್ಳ ಫಲಕಗಳನ್ನು ಹಿಡಿದು, ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಸಾಗಿದರು. ವಿದ್ಯಾರ್ಥಿಗಳಿಂದ ಕನ್ನಡದ ಕುರಿತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ನಂದಿನಿ ವಿದ್ಯಾನಿಕೇತನ ಶಾಲೆಯ ಪ್ರಾಂಶುಪಾಲ ಪಿ.ಆರ್. ಕೃಷ್ಣನ್ ಕೌಶಿಕ್ ಅವರು ಮಾತನಾಡಿ, ಕನ್ನಡವನ್ನು ಧೈನಂದಿನ ಜೀವನದಲ್ಲಿ ಬಳಕೆಗೆ ತರಬೇಕು. ನಮ್ಮ ನಾಡು, ನುಡಿ, ಭಾಷೆಯ ಏಳಿಗೆಯ ಕುರಿತು, ಮುಂದಿನ ಪೀಳಿಗೆಯಾಗಿರುವ ಮಕ್ಕಳಿಗೆ ಅರಿವು ಮೂಡಿಸುವುದರ ಜೊತೆಗೆ, ನಮ್ಮ ಭಾಷೆಯ ಹಿರಿಮೆಯನ್ನು ತಿಳಿಸಿಕೊಡಬೇಕು. ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸುತ್ತಿರುವ ಕವಿಗಳು, ಸಾಹಿತಿಗಳು, ದಾಸರು, ಶರಣರು, ಹಲವಾರು ಬಗೆಯವರನ್ನು ಅವರಿಗೆ ಪರಿಚಯಿಸಬೇಕಿದೆ. ಖಾಸಗಿ ಶಾಲೆಗಳೆಂದರೆ ಕೇವಲ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಿಗುತ್ತದೆ ಎನ್ನುವ ತಪ್ಪು ಕಲ್ಪನೆಯಿದೆ. ಮಕ್ಕಳು ಖಾಸಗಿ ಶಾಲೆಗಳಿಗೆ ದಾಖಲಾದ ಕೂಡಲೇ ಕನ್ನಡ ಭಾಷೆಯನ್ನು ಮರೆಯುತ್ತಾರೆ ಎನ್ನುವುದು ತಪ್ಪು ಕಲ್ಪನೆ ಎಂದರು.
ಪುರಸಭೆ ಅಧಿಕಾರಿ ಪೃಥ್ವಿ ಮಾತನಾಡಿ, ಪ್ರತಿಯೊಬ್ಬರೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಶೇ 60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆನ್ನುವ ಕಾರ್ಯವನ್ನು ಸಾಕಾರಗೊಳಿಸಲಾಗಿದೆ. ಸಾರ್ವಜನಿಕರು ಕನ್ನಡ ಭಾಷೆಗೆ ದಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳಬೇಕಿದೆ. ನಾವು ಜಾಗೃತರಾದರೆ ಸಾಲದು ಕನ್ನಡವನ್ನು ಮಾತನಾಡಬೇಕು. ಆಡಳಿತ ಭಾಷೆಯಾಗಿ ಉಪಯೋಗ ಮಾಡಿದಾಗ ಭಾಷೆಯ ಶ್ರೀಮಂತಿಕೆ ಹೆಚ್ಚುತ್ತದೆ ಎಂದರು.ಶಾಲೆಯ ಅಧ್ಯಕ್ಷ ಬಿ.ಚೇತನ್ ಗೌಡ, ಕರವೇ ಜಿಲ್ಲಾ ಸಂಚಾಲಕ ಮಹೇಶ್, ನಂದಿನಿ ವಿದ್ಯಾನಿಕೇತನ ಶಾಲೆಯ ಮುಖ್ಯಶಿಕ್ಷಕಿ ವಿಮಲಾ.ಎಸ್, ಅಶೋಕ್ ಶೆಟ್ಟಿ, ಕೆ.ಮಂಜುನಾಥ್, ಆರ್.ಶಂಕರ್ ಕುಮಾರ್, ಮಂಜುನಾಥ್, ಹಾಗೂ ಪುರಸಭೆಯ ಸಿಬ್ಬಂದಿ ಅನಿಲ್, ಪವನ್ ಜ್ಯೋಷಿ, ಸಹನಾ, ಇದ್ದರು.