ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿಯಾಗುವ ಅವಶ್ಯಕತೆ ನನಗಿಲ್ಲ, ಅವರಾಗಿಯೇ ಬಂದು ನನ್ನ ಜೊತೆ ಮಾತನಾಡಿಸಿದರೂ ನಾನು ಮಾತನಾಡುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕರೆದರೆ ಮಾತ್ರ ದೆಹಲಿಗೆ ಹೋಗುತ್ತೇವೆ. ಮಾತನಾಡುತ್ತೇವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ವತಃ ಕರೆದರೂ ಮಾತುಕತೆ ಸಾಧ್ಯವಿಲ್ಲ. ನಮ್ಮದು ನಿಷ್ಠರ ಬಣ. ವಿಜಯೇಂದ್ರ ಪಕ್ಷದ ಅಧ್ಯಕ್ಷ ಅಷ್ಟೇ, ಅವರ ಜೊತೆ ಗುರುತಿಸಿಕೊಂಡವರೂ ಹೋರಾಟಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯಿಂದ ನನ್ನನ್ನು ಏಕೆ ಉಚ್ಚಾಟನೆ ಮಾಡುತ್ತಾರೆ. ಉಚ್ಚಾಟನೆ ಮಾಡಲು ನಾನು ಯಾರ ಜತೆಯೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಜೊತೆಗೂ ನನಗೆ ಹೊಂದಾಣಿಕೆ ಇಲ್ಲ. ಇಂತಹ ವಿಷಯಗಳು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ತಿಳಿಸಿದರು.
ವಿಜಯೇಂದ್ರ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರ ಕುರಿತು ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಪಕ್ಷದ ಅಧ್ಯಕ್ಷ. ಸಹಜವಾಗಿ ಪಕ್ಷದ ವರಿಷ್ಠರನ್ನು ಭೇಟಿ ಮಾಡುತ್ತಾರೆ. ನಮ್ಮ ವಿರುದ್ಧ ದೂರು ಕೊಟ್ಟ ಬಗ್ಗೆ ಮಾಹಿತಿ ಇಲ್ಲ. ನಮಗೆ ಇನ್ನೊಬ್ಬರ ಮೇಲೆ ದೂರು ಕೊಟ್ಟು ಅಭ್ಯಾಸವೂ ಇಲ್ಲ. ಕಾಂಗ್ರೆಸ್ ಭಿಕ್ಷೆಯಿಂದ ಶಾಸಕರೂ ಆಗಿಲ್ಲ ಎಂದರು.
ಇನ್ನು ವಕ್ಫ್ ವಿರೋಧಿ ಎರಡನೇ ಹಂತದ ರಾಜ್ಯ ಪ್ರವಾಸದ ಕುರಿತು ನಾಳೆ (ಜ.03-ಶುಕ್ರವಾರ) ನಡೆಯಲಿರುವ ಸಭೆಯಲ್ಲಿ ತೀರ್ಮಾನವಾಗಲಿದ್ದು, ವಕ್ಫ್ ವಿರೋಧಿ ಹೋರಾಟದ ಮಹತ್ವವನ್ನು ಹೈಕಮಾಂಡ್ಗೆ ಮನವರಿಕೆ ಮಾಡಿಕೊಡುವುದಾಗಿ ಸ್ಪಷ್ಟಪಡಿಸಿದರು.