ಹನೂರು: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರಿನ ವಿಜಯ್ ಫೌಂಡೇಷನ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಬೆಳತ್ತೂರು, ಹಾವಿನ ಮೂಲೆ ಹಾಗೂ ಮರೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಎಲ್ಲಾ ಮಕ್ಕಳಿಗೆ ವಿಶೇಷವಾಗಿ ಕಾಡಂಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್ ಶೂಟ್, ಶೂ, ಸಾಕ್ಸ್, ಬ್ಲಾಂಕೆಟ್ಸ್, ಊಟ ತಟ್ಟೆ ಲೋಟಗಳನ್ನು ಹಾಗೂ ಶಾಲೆಗಳಿಗೆ ಶುದ್ಧೀಕರಣ ನೀರಿನ ವಾಟರ್ ಫಿಲ್ಟರ್ಗಳನ್ನು ವಿಜಯ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಮತ್ತು ಪದಾಧಿಕಾರಿಗಳು ವಿತರಿಸಿದರು.
ಕಳೆದ ನಾಲ್ಕೈದು ತಿಂಗಳ ಹಿಂದೆ ಈ ಚಾಮರಾಜನಗರದ ಹನೂರು ತಾಲ್ಲೂಕಿನ ವಿವಿಧ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಬ್ಯಾಗ್ ಗಳನ್ನು ವಿತರಿಸಲಾಗಿತ್ತು. ಈಗ ವಿಜಯ್ ಪ್ರತಿಷ್ಠಾನದಿಂದ ಉಚಿತವಾಗಿ ಟ್ರ್ಯಾಕ್ ಶೂಟ್, ಶೂ, ಸಾಕ್ಸ್, ಬ್ಲಾಂಕೆಟ್ಸ್, ಊಟ ತಟ್ಟೆ ಲೋಟಗಳನ್ನು ಹಾಗೂ ಶಾಲೆಗಳಿಗೆ ಶುದ್ಧೀಕರಣ ನೀರಿನ ವಾಟರ್ ಫಿಲ್ಟರ್ ಗಳನ್ನು ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳಿಗೆ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಜಯ್ ಫೌಂಡೇಷನ್ ನೆರವಾಗುವ ಉದ್ದೇಶದಿಂದ ಕಾರ್ಯ ನಿರ್ವಹಿಸಲಾಗುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿಜಕ್ಕೂ ಪ್ರತಿಭಾವಂತರು,
ಅವರಿಗೆ ಗುಣಮಟ್ಟ ಶಿಕ್ಷಣ ದೊರೆತರೆ ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಬೆಂಗಳೂರಿನ ಐಟಿಬಿಟಿ, ಇನ್ನಿತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ನೇಹಿತರೆಲ್ಲರೂ ವಿಜಯ್ ಫೌಂಡೇಷನ್ ಮೂಲಕ ತಮ್ಮ ಬಿಡುವಿನ ವೇಳೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಹಾಯಸ್ತವನ್ನು ನೀಡಲು ಮುಂದಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ್ ತಿಳಿಸಿದರು.
ವಿಜಯ್ ಫೌಂಡೇಷನ್ ತಂಡದ ಕೆ.ಎಲ್.ಇ ಕಾಲೇಜಿನ ಬಯೋಟೆಕ್ ವಿಭಾಗದ ಮುಖ್ಯ ಪ್ರಾಧ್ಯಾಪಕರಾದ ಶ್ರೀಮತಿ ಪ್ರತಿಭಾ ಕೆ. ಎಸ್ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳು ಬಹಳಷ್ಟು ಪ್ರತಿಭಾವಂತರು ಇದ್ದಾರೆ ಅವರಿಗೆ ಬೇಕಾಗುವ ಕನಿಷ್ಠ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ವಿಜಯ್ ಫೌಂಡೇಷನ್ ಅಧ್ಯಕ್ಷರು ಬಹಳಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ವಿದ್ಯಾರ್ಥಿಗಳು ಸದಾ ಕಠಿಣ ಅಭ್ಯಾಸ ಮಾಡಬೇಕು. ಶಿಕ್ಷಕರನ್ನು ತಂದೆ-ತಾಯಿಯನ್ನು ಗೌರವಿಸಬೇಕು, ಪುಸ್ತಕಗಳನ್ನು ಪ್ರೀತಿಸಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಬಹಳ ಅವಶ್ಯಕ. ಇವೆರಡನ್ನು ನಿಮ್ಮ ಸಂಗಾತಿಗಳನ್ನಾಗಿ ಮಾಡಿಕೊಂಡರೆ ಭವಿಷ್ಯದಲ್ಲಿ ಸೋಲು ಸುಳಿಯುವುದಿಲ್ಲ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷ ರ. ನರಸಿಂಹಮೂರ್ತಿ ಮಾತನಾಡಿ ವಿಜಯ್ ಫೌಂಡೇಷನ್ ನ ಸಂಸ್ಥಾಪಕ ಅಧ್ಯಕ್ಷರಾದ ವಿಜಯಕುಮಾರ್ ಮತ್ತು ಅವರ ತಂಡ ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಕಾಡಾಂಚ್ಚಿನ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು, ಬ್ಯಾಗ್ ಗಳನ್ನು ನೀಡಿತ್ತು, ಈಗ ಮಕ್ಕಳಿಗೆ ಶೂ, ಸಾಕ್ಸ್, ಟ್ರಾಕ್ ಶೂಟ್, ಊಟದ ತಟ್ಟೆ, ಲೋಟ ಹಾಗೂ ಶಾಲೆಗಳಿಗೆ ವಾಟರ್ ಫಿಲ್ಟರ್ ವಿತರಣೆ ಮಾಡುವ ಮೂಲಕ ಮಹಾನ್ ಕಾರ್ಯ ಕೈಗೊಂಡಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಹಳ್ಳಿಗಾಡಿನಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಸೂಕ್ತಮಾರ್ಗದರ್ಶನ ಮತ್ತು ನೆರವಿನ ಅಗತ್ಯವಿದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯರು ಮಾತನಾಡಿ ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಭಾಗದ ಕಾಡಾಂಚಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ವಿಜಯ್ ಫೌಂಡೇಷನ್ ಸರ್ಕಾರಿ ಶಾಲೆ ಮಕ್ಕಳ ಅನುಕೂಲಕ್ಕಾಗಿ ಟ್ರ್ಯಾಕ್ ಶೂಟ್, ಶೂ, ಸಾಕ್ಸ್, ಬೆಡ್ ಶೀಟ್, ಊಟದ ತಟ್ಟೆ, ಲೋಟ ಹಾಗೂ ಮಕ್ಕಳಿಗೆ ಶುದ್ಧೀಕರಣ ನೀರು ಕುಡಿಯಲು ವಾಟರ್ ಫಿಲ್ಟರ್ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಮಾನವೀಯ ಕಾರ್ಯ ಮಾಡುತ್ತಿರುವ ವಿಜಯ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರಿಗೆ ಮತ್ತು ತಂಡದ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.ಶಿಕ್ಷಕ ಮಹಾದೇವ್, ವಿಜಯ್ ಫೌಂಡೇಷನ್ ನ ಕಾರ್ಯದರ್ಶಿ ತಿರುಮಲೇ ಗೌಡರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.