ಭಾರತದ ದೇಶೀಯ ಟೂರ್ನಿ ವಿಜಯ್ ಹಜಾರೆ ಟ್ರೋಫಿಗೆ ಉತ್ತರ ಪ್ರದೇಶ ತಂಡವನ್ನು ಪ್ರಕಟಿಸಲಾಗಿದೆ. ಇಂದಿನಿಂದ ಆರಂಭವಾಗಲಿರುವ ಈ ಟೂರ್ನಿಗೆ ರಿಂಕು ಸಿಂಗ್ ಅವರನ್ನು ತಂಡದ ನಾಯಕನಾಗಿ ಮಾಡಲಾಗಿದೆ. ಭುವನೇಶ್ವರ್ ಕುಮಾರ್ ಬದಲಿಗೆ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭುವನೇಶ್ವರ್ ಕುಮಾರ್ ಉತ್ತರ ಪ್ರದೇಶ ತಂಡದ ನಾಯಕರಾಗಿದ್ದರು.
ಆದರೀಗ ತಂಡದ ನಾಯಕತ್ವವನ್ನು ರಿಂಕು ಸಿಂಗ್ಗೆ ನೀಡಲಾಗಿದೆ. ಈ ಮೂಲಕ ರಿಂಕು ಇದೇ ಮೊದಲ ಬಾರಿಗೆ ಸೀನಿಯರ್ ಮಟ್ಟದಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ರಿಂಕು ಯುಪಿ ಟಿ 20 ಲೀಗ್ನಲ್ಲಿ ಮೀರತ್ ಮೇವರಿಕ್ಸ್ ತಂಡದ ನಾಯಕತ್ವವಹಿಸಿ ತಂಡವನ್ನು ಚಾಂಪಿಯನ್ ಮಾಡಿದ್ದರು.
ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ತಂಡದ ನಾಯಕತ್ವವಹಿಸಿಕೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರಿಂಕು ಸಿಂಗ್, `ಯುಪಿ ಟಿ20 ಲೀಗ್ನಲ್ಲಿ ನಾಯಕತ್ವವಹಿಸಿದ್ದು ನನಗೆ ದೊಡ್ಡ ಅವಕಾಶವಾಗಿತ್ತು. ಈ ಅವಧಿಯಲ್ಲಿ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು. ಯುಪಿ ಟಿ20 ಲೀಗ್ನಲ್ಲೂ ಬೌಲಿಂಗ್ನತ್ತ ಗಮನ ಹರಿಸಿದ್ದೆ. ಆಧುನಿಕ ಕ್ರಿಕೆಟ್ಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುವ ಆಟಗಾರರ ಅಗತ್ಯವಿದೆ. ಹೀಗಾಗಿ ನಾನು ನನ್ನ ಬೌಲಿಂಗ್ನಲ್ಲಿಯೂ ಕೆಲಸ ಮಾಡಿದ್ದೇನೆ. ನಾಯಕನಾಗಿ ನನ್ನ ಜವಾಬ್ದಾರಿ ಹೆಚ್ಚಿದೆ. ನಾನು ಇದಕ್ಕೆ ಸಿದ್ಧನಿದ್ದೇನೆ ಎಂದಿದ್ದಾರೆ.