ಅಹಮದಾಬಾದ್: ಶ್ರೇಯಸ್ ಗೋಪಾಲ್ ಅವರ ಸ್ಪಿನ್ ಮೋಡಿ ಜತೆಗೆ ಮಯಂಕ್ ಅಗರ್ವಾಲ್ ಅವರ ಸೊಬಗಿನ ಶತಕದ ಬಲದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ತನ್ನ ಅಂತಿಮ ಗುಂಪು ಪಂದ್ಯದಲ್ಲಿ ನಾಗಲ್ಯಾಂಡ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ.
ಇದರೊಂದಿಗೆ ಆಡಿದ 7 ಪಂದ್ಯಗಳಿಂದ ಒಟ್ಟು 24 ಅಂಕಗಳನ್ನು ಕಲೆ ಹಾಕಿದ ಕರ್ನಾಟಕ, ಸಿ ಗುಂಪಿನ ಅಗ್ರಸ್ಥಾನಿ ನೇರವಾಗಿ ನಾಕೌಟ್ ಹಂತ ಪ್ರವೇಶಿಸಿದೆ. ಜನವರಿ 12ರಂದು ಮಾಯಾಂಕ್ ಪಡೆ ವಡೋದರದಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ.ಗುಜರಾತ್ ಕಾಲೇಜು ಗ್ರೌಂಡ್ನಲ್ಲಿ ಭಾನುವಾರ ಪಂದ್ಯದಲ್ಲಿ ನಾಗಲ್ಯಾಂಡ್ ಒಡ್ಡಿದ 207 ರನ್ ಗುರಿ ಬೆನ್ನಟ್ಟಿದ ಕರ್ನಾಟಕ, 37.5 ಓವರ್ಗಳಲ್ಲಿ 1 ವಿಕೆಟ್ಗೆ 207 ರನ್ ಗಳಿಸಿ, ಟೂರ್ನಿಯಲ್ಲಿ ಆರನೇ ಜಯ ದಾಖಲಿಸಿತು.
ಮಾಯಾಂಕ್ ಆಕರ್ಷಕ ಶತಕಕೇವಲ 9 ರನ್ಗೆ ನಿಕಿನ್ ಜೋಸ್ ಅವರನ್ನು ಕಳೆದುಕೊಂಡ ಕರ್ನಾಟಕ, ಮುರಿಯದ 2ನೇ ವಿಕೆಟ್ಗೆ ಮಾಯಾಂಕ್(116*; 119 ಎಸೆತ, 9 ಬೌಂಡರಿ, 4 ಸಿಕ್ಸರ್) ಮತ್ತು ಅನೀಶ್ (82; 95 ಎಸೆತ, 10 9 ಬೌಂಡರಿ) ಕಲೆಹಾಕಿದ 198 ರನ್ಗಳ ಜತೆಯಾಟದಿಂದ ಗೆದ್ದು ಬೀಗಿತು.ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನಾಗಲ್ಯಾಂಡ್ 48.3 ಓವರ್ ಗಳಲ್ಲಿ 206 ಗಳಿಸಿ ಸರ್ವಪತನ ಕಂಡಿತು. ಆರಂಭಿಕ ಆಟಗಾರ ರೂಪೇರೋ ಅವರನ್ನು ಪಂದ್ಯದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಮಾಡಿದ ವೇಗದ ಬೌಲರ್ ವಾಸುಕಿ ಕೌಶಿಕ್ ಎದುರಾಳಿ ತಂಡಕ್ಕೆ ಮೊದಲ ಆಘಾತ ನೀಡಿದರು.6ನೇ ಓವರ್ ನ ಕೊನೆಯ ಎಸೆತದಲ್ಲಿ ಮತ್ತೊಬ್ಬ ಆರಂಭಿಕ ದಿಗಾ ನಿಶ್ಚಲ್ ಅವರನ್ನು ಪೆವಿಲಿಯನ್ ಗಟ್ಟಿದ ಎಡಗೇ ಮಧ್ಯಮ ವೇಗಿ ಅಭಿಷೇಕ್ ಶೆಟ್ಟಿ ಮತ್ತೊಂದು ಹೊಡೆತ ನೀಡಿದರು.