ಬೌಲರ್ಗಳ ಸಂಘಟನಾತ್ಮಕ ಪ್ರದರ್ಶನದ ನೆರವಿನಿಂದ ವಿದರ್ಭ ತಂಡ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕೇರಳ ತಂಡದ ವಿರುದ್ಧ 37 ರನ್ ಗಳ ಪ್ರಥಮ ಇನ್ನಿಂಗ್ಸ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಹೀಗಾಗಿ ಶತಾಯಗತಾಯ ಪ್ರಥಮ ಇನ್ನಿಂಗ್ಸ್ ಮುನ್ನಡೆ ಸಾಧಿಸಬೇಕು ಎಂದಿದ್ದ ಕೇರಳ ತಂಡದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ.
ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶುಕ್ರವಾರ 3 ವಿಕೆಟ್ಗೆ 131 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕೇರಳ, ದಿನದಾಟದ ಮುಕ್ತಾಯಕ್ಕೆ 125 ಓವರ್ಗಳಲ್ಲಿ 342 ರನ್ಗಳಿಗೆ ಆಲೌಟಾಗಿ 37 ರನ್ಗಳ ಹಿನ್ನಡೆ ಅನುಭವಿಸಿತು. ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಅಲ್ಪ ಮುನ್ನಡೆಯೊಂದಿಗೆ ಮೊದಲ ಸಲ ಫೈನಲ್ ಪ್ರವೇಶಿಸಿದ್ದ ಕೇರಳ ನಿರ್ಣಾಯಕ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಪಡೆಯಲು ವಿಫಲಗೊಂಡಿದೆ.
ಪ್ರಸ್ತುತ 37 ರನ್ಗಳ ಮುನ್ನಡೆ ಹೊಂದಿರುವ ವಿದರ್ಭ, ಪಂದ್ಯದ ನಾಲ್ಕನೇ ದಿನವಾದ ಶನಿವಾರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ, ಕೇರಳ ತಂಡಕ್ಕೆ ಕಠಿಣ ಸವಾಲು ನೀಡಬಹುದು. ಮತ್ತೊಂದೆಡೆ ಕೇರಳ ಬೌಲರ್ಗಳು ಕರಾರುವಾಕ್ ಬೌಲಿಂಗ್ ಸಂಘಟಿಸಿದ್ದಲ್ಲಿ ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿ ಗುರಿ ಭೇದಿಸಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ತನ್ನದಾಗಿಸಿಕೊಳ್ಳಬಹುದು. ಹೀಗಾಗಿ ಶನಿವಾರದ ಆಟವು ಉಭಯ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ.