ಬೆಂಗಳೂರು: ದೇಶದ ಹೈಟೆಕ್ ಉದ್ಯಮ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಆಟೋಗಳು ಬಡವರ ರಥ ಎಂದೆನಿಸಿಕೊಂಡಿದ್ದವು. ಆದರೆ, ಈಗ ನಗರದಲ್ಲಿ ಆಟೋ ಚಾಲಕರದ್ದೇ ದರ್ಬಾರ್ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ದುಪ್ಪಟ್ಟು ಹಣ ನೀಡುವಂತೆ ಆಟೋ ಚಾಲಕನೊಬ್ಬ ವಿದ್ಯಾರ್ಥಿಯೋರ್ವನಿಗೆ ಬೆದರಿಕೆ ಹಾಕಿ, ದರ್ಪ ತೋರಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಖಾಸಗಿ ಕಂಪೆನಿಯೊಂದರಲ್ಲಿ ಇಂಟರ್ನ್ಶಿಪ್ ಮುಗಿಸಿ ವಾಪಸ್ ಆಗುವ ವೇಳೆ 20ವರ್ಷದ ಯುವಕನೋರ್ವ ನಮ್ಮ ಯಾತ್ರಿ ಆ್ಯಪ್ ಮೂಲಕ ಬೆಳ್ಳಂದೂರಿನಿಂದ ಮೈಲಸಂದ್ರಕ್ಕೆ ಆಟೋ ಬುಕ್ ಮಾಡಿದ್ದಾನೆ. ಈ ವೇಳೆ ಆ್ಯಪ್ ನಲ್ಲಿ 380 ರೂಪಾಯಿ ತೋರಿಸಿದೆ.
ಚಾಲಕ 50 ರೂಪಾಯಿ ಹೆಚ್ಚಾಗಿ ನೀಡುವಂತೆ ಸೂಚಿಸಿದ್ದಾನೆ. ಇದಕ್ಕೆ ಒಪ್ಪಿದ ವಿದ್ಯಾರ್ಥಿ, ಆಟೋ ಹತ್ತಿ ಮನೆಗೆ ಬಂದಿದ್ದಾನೆ. ಈ ವೇಳೆ 380 ರ ಜೊತೆಗೆ 50 ರೂಪಾಯಿ ಹೆಚ್ಚಿಗೆ ನೀಡಲು ಮುಂದಾದಾಗ 500 ರೂಪಾಯಿ ನೀಡುವಂತೆ ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಹಿಂದೇಟು ಹಾಕಿದಾಗ ಆತನ ಮೇಲೆ ಅವ್ಯಾಚ್ಯ ಪದಗಳಿಂದ ನಿಂದಿಸಿ, ತನ್ನಿಬ್ಬರು ಕುಡುಕ ಸ್ನೇಹಿತರನ್ನು ಕರೆಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅಲ್ಲದೆ, ವಿದ್ಯಾರ್ಥಿ ಕೆಲಸ ಮಾಡುವ ಸ್ಥಳ ತಿಳಿದಿದ್ದು, ಅಲ್ಲಿಗೆ ಬಂದು ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆಗೆ ಹೆದರಿದ ವಿದ್ಯಾರ್ಥಿ ತನ್ನ ಬಳಿ ಇದ್ದ ರೂ.400 ನೀಡಿ, ರೂ.100ನ್ನು ಯುಪಿಐ ಮೂಲಕ ಪಾವತಿ ಮಾಡಿದ್ದಾನೆ.
ಚಾಲಕನ ಈ ಹುಚ್ಚಾಟದ ವಿಡಿಯೋವನ್ನು ವಿದ್ಯಾರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕನ ದುರ್ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜನಾಂಗೀಯ ನಿಂದನೆ ಕೂಡ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಈ ಪೋಸ್ಟ್ ನ್ನು ಬೆಂಗಳೂರು ನಗರ ಪೊಲೀಸರು ಹಾಗೂ ನಮ್ಮಯಾತ್ರಿ ಆಟೋ ಸಂಸ್ಥೆಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಟೋ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ನಮ್ಮ ಯಾತ್ರಿ ಆಟೋ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಚಾಲಕನ ದುರ್ವರ್ತನೆ ಒಪ್ಪಲು ಸಾಧ್ಯವಿಲ್ಲ. ನಿಮ್ಮ ಸುರಕ್ಷತೆ ಮತ್ತು ಸೌಕರ್ಯವು ನಮಗೆ ಅತ್ಯುನ್ನತವಾದದ್ದು. ಈ ರೀತಿಯ ಘಟನೆಗಳು ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತೇವೆ. ನಿಮಗೆ ಸಹಾಯ ಬೇಕಿದ್ದಲ್ಲಿ, ನಮಗೆ ನೇರವಾಗಿ ಸಂದೇಶ ಕಳುಹಿಸಿ ಎಂದು ಹೇಳಿದೆ.