ದೊಡ್ಡಬಳ್ಳಾಪುರ: ಇಲ್ಲಿನ ಶ್ರೀ ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘದ ನೇತೃತ್ವದಲ್ಲಿ ನೇಕಾರರ ಪ್ರತಿಭಾವಂತ ಮಕ್ಕಳಿಗೆ 3ನೇ ವರ್ಷದ ಪುರಸ್ಕಾರ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ಪುಸ್ತಕಗಳ ವಿತರಣೆ ಕಾರ್ಯಕ್ರಮ ನಡೆಯಿತು.ಮುತ್ಯಾಲಮ್ಮಗುಡಿ ಪಾಳ್ಯ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಮಾತನಾಡಿ, ವಿದ್ಯಾವಂತ ಸಮಾಜ ದೇಶದ ಪ್ರಗತಿಗೆ ಪೂರಕವಾಗಿದ್ದು, ಶೈಕ್ಷಣಿಕ ಪ್ರಗತಿ ಎಲ್ಲ ಸಂಘಟನೆಗಳ ಆದ್ಯತೆಯಾಗಬೇಕು. ಸ್ವಾತಂತ್ರ್ಯವನ್ನು ಸ್ವಹಿತಕ್ಕೆ ಬಳಸಿಕೊಳ್ಳುವುದು ತಪ್ಪು. ನಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡುವ ಮೂಲಕ ದೇಶದ ಏಳಿಗೆಗೆ ನಮ್ಮ ಕೊಡುಗೆಯನ್ನು ನೀಡಬೇಕು ಎಂದು ತಿಳಿಸಿದರು.
ಬೆಂ.ಗ್ರಾ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ .ಕೆ.ಆರ್.ರವಿಕಿರಣ್ ಮಾತನಾಡಿ, ಮಕ್ಕಳು ಅಕ್ಷರ ನಂಟನ್ನು ಗಟ್ಟಿಗೊಳಿಸಿಕೊಳ್ಳುವುದು ಅಗತ್ಯ. ಶೈಕ್ಷಣಿಕ ಸಾಧನೆ ಸಾಮಾಜಿಕ ಪ್ರಗತಿಯ ಧ್ಯೋತಕವೂ ಆಗಿರುತ್ತದೆ. ದೇಶದ ಸ್ವಾತಂತ್ರ್ಯ ಚಳವಳಿಯ ಗಾಥೆಯನ್ನು ಅರಿತುಕೊಳ್ಳುವ ಸಂದರ್ಭದಲ್ಲಿ ಆ ಮಹಾ ಹೋರಾಟದಲ್ಲಿ ದೊಡ್ಡಬಳ್ಳಾಪುರದ ಕೊಡುಗೆಯನ್ನು ಸ್ಮರಿಸುವುದು ಅಗತ್ಯ ಎಂದರು.
ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ನೇಕಾರರ ಮಕ್ಕಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
78ನೇ ಸ್ವಾತಂತ್ರ್ಯ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ರಾಮಣ್ಣ, ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ಮುನಿನಾರಾಯಣಸ್ವಾಮಿ, ಸಹ ಕಾರ್ಯದರ್ಶಿ ವಿಜಯಕುಮಾರ್, ನಿರ್ದೇಶಕರಾದ ಲಕ್ಷ್ಮೀಕಾಂತ, ಬಾಬು, ಅನಿಲ್ಕುಮಾರ್, ಮಧುಚಂದ್ರ, ಜಯರಾಮ್, ನಾರಾಯಣಸ್ವಾಮಿ, ಅಶೋಕ್, ಶೋಭಾ, ಆರ್.ಶೋಭಾ ಮತ್ತಿತರರು ಹಾಜರಿದ್ದರು.